ಸರಳ ರೀತಿಯಲ್ಲಿ ವಿವಾಹವಾದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಟಿ

ಉಡುಪಿ ಫೆಬ್ರವರಿ 26: ಇತ್ತೀಚೆಗಷ್ಟೇ ಉಡುಪಿಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಟಿ ಅವರು ಹುಬ್ಬಳ್ಳಿಯಲ್ಲಿ ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಅವರೊಂದಿಗೆ ಸರಳವಾಗಿ ವಿವಾಹವಾಗಿದ್ದಾರೆ.

ಝಾರ್ಖಂಡ್‌ ಪಶ್ಚಿಮ ಬಂಗಾಲ ಗಡಿಯಾದ ಸಾಹಿಬ್‌ಗಂಜ್‌ನ ಬಂಗಾಲಿ ಮೂಲದ ಘೋಷ್‌ 2008ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಆಂಧ್ರಪ್ರದೇಶ ವಿಜಯವಾಡ ಮೂಲದ ಕೊರ್ಲಪಾಟಿ 2011ರ ಬ್ಯಾಚ್‌ ಐಎಎಸ್‌ ಅಧಿಕಾರಿ. ಸೋಮವಾರ ಹುಬ್ಬಳ್ಳಿಯ ವಿವಾಹ ನೋಂದಣಿ ಕಚೇರಿಯಲ್ಲಿ ಕುಟುಂಬ ಸದಸ್ಯರು ಹಾಗೂ ಆಯ್ದ ಗಣ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಹೆಪ್ಸಿಪಾ ರಾಣಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿ ಎಂ.ಡಿ. ಆಗಿದ್ದರು. ಕೆಲ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. 30 ದಿನಗಳ ಹಿಂದೆ ಹೆಸರು ನೋಂದಾಯಿಸಿದ್ದರು. ಸೋಮವಾರ ಸರತಿ ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯಲ್ಲಿ ಕುಟುಂಬ ಸಮೇತ ಕಚೇರಿಗೆ ಆಗಮಿಸಿ, ನೋಂದಣಾಧಿಕಾರಿ ದೇವೇಂದ್ರ ಎದುರು ಹಾರ ಬದಲಾಯಿಸಿಕೊಂಡರು.

ಹಿರಿಯ ಐಎಎಸ್‌ ಅಧಿಕಾರಿಗಳಾದ ಆರ್‌. ವಿಶಾಲ್‌, ಪಿ.ಸಿ. ಜಾಫ‌ರ್‌, ಸುನಿಲ್‌ ಪನ್ವಾರ್‌, ಸುಶೀಲಾ ಈ ಮದುವೆಗೆ ಸಾಕ್ಷಿಗಳಾಗಿ ದಾಖಲೆಗೆ ಸಹಿ ಹಾಕಿದರು. ಧಾರವಾಡ ಡಿಸಿ ದೀಪಾ ಚೋಳನ್‌, ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮಹೇಶ ಕುಮಾರ್‌ ನೂತನ ದಂಪತಿಗೆ ಶುಭ ಹಾರೈಸಿದರು. ಸಬ್‌ ರಿಜಿಸ್ಟ್ರಾರ್‌ ಕಚೇರಿ ಆವರಣದಲ್ಲಿಯೇ ಸರಳ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.