ಬ್ರಹ್ಮಾವರ ಜುಲೈ 01: ರಾಷ್ಟ್ರೀಯ ಹೆದ್ದಾರಿಯ ಹೇರೂರು ಸಮೀಪ ಸೋಮವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರಾವಳಿ ಭಾಗದ ಪ್ರಸಿದ್ಧ ಹುಲಿ ವೇಷದ ಕಲಾವಿದರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಡುಪಿಯ ಸಂತೆಕಟ್ಟೆ ಲಕ್ಷ್ಮೀನಗರ ನಿವಾಸಿ ಮಂಜುನಾಥ್ (43) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಪಘಾತದ ವೇಳೆ ಕಾರಿನಲ್ಲಿದ್ದ ಉಳಿದ ನಾಲ್ವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಜುನಾಥ್ ಸೇರಿದಂತೆ ಒಟ್ಟು ಐದು ಮಂದಿ ಗೋವಾದಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಭಾಗವಹಿಸಿ ಕಾರಿನ ಮುಖಾಂತರ ಉಡುಪಿಗೆ ಹಿಂದಿರುಗುತ್ತಿದ್ದರು. ಇವರ ಕಾರು ಬ್ರಹ್ಮಾವರ ದಾಟಿ ಹೇರೂರು ಕ್ರಾಸ್ ಸಮೀಪ ಬರುತ್ತಿದ್ದಂತೆ, ಉಡುಪಿ ಕಡೆಗೆ ಸಂಚರಿಸುತ್ತಿದ್ದ ವೇಗದೂತ (ಎಕ್ಸ್ಪ್ರೆಸ್) ಬಸ್ನ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಪರಿಣಾಮ, ಬಸ್ಸಿನ ಹಿಂಬದಿಯಲ್ಲೇ ತೀರಾ ಹತ್ತಿರದಲ್ಲಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಭೀಕರವಾಗಿ ಬಸ್ಸಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ಭೀಕರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಪೆಟ್ಟು ಬಿದ್ದ ಮಂಜುನಾಥ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮೃತ ಮಂಜುನಾಥ್ ಅವರು ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯಾದ ‘ಹುಲಿ ವೇಷ’ (ಪಿಲಿವೇಷ) ಕಲೆಯ ಅದ್ಭುತ ಪೈಂಟಿಂಗ್ ಕಲಾವಿದರಾಗಿದ್ದರು. ಹಲವು ವರ್ಷಗಳಿಂದ ಕರಾವಳಿಯ ನೂರಾರು ಹುಲಿ ವೇಷಧಾರಿಗಳಿಗೆ ಅತ್ಯಂತ ಆಕರ್ಷಕವಾಗಿ ಬಣ್ಣ ಹಚ್ಚುವ ಮೂಲಕ ಇಡೀ ಅವಳಿ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಹೆಸರು ಗಳಿಸಿದ್ದರು. ಇವರ ಅಕಾಲಿಕ ನಿಧನಕ್ಕೆ ಕರಾವಳಿಯ ಕಲಾಭಿಮಾನಿಗಳು ಹಾಗೂ ಸಾಂಸ್ಕೃತಿಕ ವಲಯ ತೀವ್ರ ಕಂಬನಿ ಮಿಡಿದಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.