ಉಡುಪಿ ಜಿಲ್ಲೆ ಭಾಗಶಃ ಬರಪೀಡಿತ ಪ್ರದೇಶ – ಉಸ್ತುವಾರಿ ಸಚಿವೆ ಜಯಮಾಲಾ

ಉಡುಪಿ ಮೇ 10: ಉಡುಪಿಯಲ್ಲಿ ಭಾರಿ ನೀರಿನ ಸಮಸ್ಯೆ ಎದುರಾಗಿರುವ ಹಿನ್ನಲೆಯಲ್ಲಿ ಜಿಲ್ಲೆಯನ್ನು ಭಾಗಶಃ ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಜಿಲ್ಲೆಯ 126 ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದೆ, ಈ ಪ್ರದೇಶಗಳಿಗೆ ಎಲ್ಲಾ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಹೇಳಿದರು.

ಬಜೆ ಡ್ಯಾಂ ನೀರು ಸಂಪೂರ್ಣ ಇಂಗಿ ಹೋಗಿದ್ದು, ಡ್ಯಾಂ ನ ಹೂಳೆತ್ತುವ, ಬಂಡೆ ಒಡೆಯುವ ಪ್ರಕ್ರಿಯೆ ಮಾಡಲಾಗುವುದು ಎಂದು ಹೇಳಿದ ಅವರು ಜಿಲ್ಲೆಯ ಬರ ನಿರ್ವಹಣೆಯ ಹಣಕಾಸಿಗೆ ತೊಂದರೆ ಇಲ್ಲ, ಈಗಾಗಲೇ ಡಿಸಿ ಅಕೌಂಟ್ ನಲ್ಲಿ 33 ಕೋಟಿ ರುಪಾಯಿ ಇದೆ ಎಂದು ಹೇಳಿದರು.

ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣದಲ್ಲಿ ಏಳು ಮೀನುಗಾರರು ಕಣ್ಮರೆಯಾಗಿದ್ದು, ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವ ಆದೇಶ ಮಾಡಲಾಗಿದ್ದು, ಮೀನುಗಾರ ಸಂಕಷ್ಟ ಪರಿಹಾರ ನಿಧಿ, ಸಿಎಂ ಪರಿಹಾರ ನಿಧಿಯಿಂದ ಹಣ ನೀಡಲಾಗುವುದು ಎಂದರು. ಅಲ್ಲದೆ ಕಣ್ಮರೆಯಾಗಿರುವ ಮೀನುಗಾರರ ಶೀಘ್ರವಾಗಿ ಪತ್ತೆಯಾಗಲಿ ಎಂಬ ಆಶಯ ನಮ್ಮದು ಎಂದು ಹೇಳಿದರು. ಅಲ್ಲದೆ ಕೇಂದ್ರ ಸರಕಾರಕ್ಕೆ ಹೆಚ್ಚಿನ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.