ದುಬೈ ಮೇ 04: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದು, ಇರಾನ್ನಿಂದ ಬಂದ ಸರಣಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತನ್ನ ವಾಯು ರಕ್ಷಣಾ ಪಡೆಗಳು ಸಮರ್ಥವಾಗಿ ಎದುರಿಸುತ್ತಿವೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಿಳಿಸಿದೆ.

ಇರಾನ್ ಯುಎಇ ಮೇಲೆ ನಾಲ್ಕಕ್ಕೂ ಅಧಿಕ ಕ್ಷಿಪಣಿಗಳನ್ನು ಹಾರಿಸಿದ್ದು, ಅವುಗಳನ್ನು ಏರ್ ಡಿಪೆನ್ಸ್ ಹೊಡೆದುರುಳಿಸಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಸೋಮವಾರ ತಡರಾತ್ರಿ ಖಚಿತಪಡಿಸಿದೆ.
ಇತ್ತ ಫುಜೈರಾ ಎಮಿರೇಟ್ನಲ್ಲಿ ಇರಾನಿನ ಡ್ರೋನ್ ದಾಳಿಯಿಂದಾಗಿ ತೈಲ ಘಟಕವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ನಾಗರಿಕ ರಕ್ಷಣಾ ತಂಡಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಫುಜೈರಾ ಮಾಧ್ಯಮ ಕಚೇರಿ ತಿಳಿಸಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
ಹಾರ್ಮುಜ್ ಜಲಸಂಧಿಯಲ್ಲಿ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ADNOC) ಗೆ ಸೇರಿದ ತೈಲ ಟ್ಯಾಂಕರ್ ಮೇಲೆ ನಡೆದ ದಾಳಿಯನ್ನು ಯುಎಇ ತೀವ್ರವಾಗಿ ಖಂಡಿಸಿದೆ. ಈ ಜಲಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ರಕ್ಷಣೆ ನೀಡಲು ಯುನೈಟೆಡ್ ಸ್ಟೇಟ್ಸ್ (US) ಮಾರ್ಗದರ್ಶನ ನೀಡಲು ಆರಂಭಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಈ ದಾಳಿಗಳು ನಡೆದಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿವೆ.
ಈ ಬೃಹತ್ ದಾಳಿಗಳ ಬಗ್ಗೆ ಇರಾನ್ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಸದ್ಯ ಯುಎಇ ತನ್ನ ಗಡಿ ಮತ್ತು ಆರ್ಥಿಕ ಮೂಲಸೌಕರ್ಯಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ.