ಬೆಂಗಳೂರು, ಮಾರ್ಚ್ 09: ನಗರದಿಂದ ಕುಣಿಗಲ್ ಕಡೆಗೆ ಜಾಲಿ ರೈಡ್ ಹೋಗುವಾಗ ಹೆದ್ದಾರಿಯಲ್ಲಿ ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಡಿಗ್ರಿ ಫೈನಲ್ ಇಯರ್ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ನೆಲಮಂಗಲ ತಾಲ್ಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಘಟನೆ ನಡೆದಿದೆ. 22 ವರ್ಷದ ಚಂದನ್ ಮತ್ತು ಮಹೇಶ್ ಹೊಸ ಬೈಕ್ನೊಂದಿಗೆ ಜಾಲಿಯಾಗಿ ರೈಡ್ ಹೋದಾಗ ದುರ್ಘಟನೆ ಸಂಭವಿಸಿದೆ.
ಇವರಿಬ್ಬರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿಗಳಾಗಿದ್ದು, ಬೆಂಗಳೂರಿಂದ ಕುಣಿಗಲ್ ಕಡೆಗೆ ಹೊರಟಿದ್ದರು. ಈ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಚಂದನ್ ತಲೆಗೆ ಗಂಭಿರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತ್ತ ಗಂಭೀರ ಸ್ಥಿತಿಯಲ್ಲಿದ್ದ ಮಹೇಶನ ತಲೆಗೂ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಮಹೇಶ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ. ಹೆಲ್ಮೆಟ್ ಕೈನಲ್ಲಿದ್ದರು ತಲೆಗೆ ಧರಿಸಿಕೊಳ್ಳದೇ ಬೇಜಾವಾಬ್ದಾರಿಯಿಂದ ವಿದ್ಯಾರ್ಥಿಗಳು ಬೈಕ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.