LATEST NEWS
ಐಶಾರಾಮಿ ಕಾರು ಮಾರಾಟ ಪ್ರಕರಣ – ಎಸ್ಐ ಕಬ್ಬಾಳರಾಜ್, ಇನ್ ಸ್ಪೆಕ್ಟರ್ ರಾಮಕೃಷ್ಣ ಸಸ್ಪೆಂಡ್
ಮಂಗಳೂರು ಫೆಬ್ರವರಿ 27: ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ಐಶಾರಾಮಿ ಕಾರುಗಳ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತು ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಮಂಗಳೂರು ಸಿಸಿಬಿ ತಂಡದಲ್ಲಿ ಎಸ್ಐ ಆಗಿದ್ದ ಕಬ್ಬಾಳರಾಜ್ ಮತ್ತು ಪಾಂಡೇಶ್ವರದ ಇಕನಾಮಿಕ್ ಮತ್ತು ನಾರ್ಕೋಟಿಕ್ ಠಾಣೆಯ ಇನ್ ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಕಳೆದ ಅಕ್ಟೋಬರ್ 16ರಂದು ಮಂಗಳೂರಿನ ನಾರ್ಕೋಟಿಕ್ ಠಾಣೆಯಲ್ಲಿ ಹಣ ಡಬ್ಲಿಂಗ್ ಜಾಲದ ಆರೋಪದ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಇಬ್ಬರನ್ನು ಸಿಸಿಬಿ ತಂಡ ಬಂಧಿಸಿದ್ದು, ಆರೋಪಿಗಳಿಗೆ ಸೇರಿದ ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು. ನಂತರ ಪ್ರಕರಣದಲ್ಲಿ ಹಣದ ಡೀಲಿಂಗ್ ನಡೆದಿದ್ದ, ಹಣದ ಬದಲಿಗೆ ಆರೋಗಳ ಐಶಾರಾಮಿ ಕಾರುಗಳನ್ನು ಮಾರಾಟ ಮಾಡಿ ಪೊಲೀಸರು ಹಣವನ್ನು ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣದ ಬಗ್ಗೆ ಮಂಗಳೂರು ಡಿಸಿಪಿ ವಿನಯ ಗಾಂವ್ಕರ್ ರಾಜ್ಯದ ಪೊಲೀಸ್ ವರಿಷ್ಠರಿಗೆ ವರದಿ ನೀಡಿದ್ದು, ಅದರಂತೆ ಇಬ್ಬರು ಅಧಿಕಾರಿಗಳನ್ನು ಪ್ರಾಥಮಿಕ ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ. ಅಲ್ಲದೆ, ಹಣ ಡಬ್ಲಿಂಗ್ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.