ಇಂಫಾಲ, ಏಪ್ರಿಲ್ 07: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮಂಗಳವಾರ ಮನೆಯೊಂದರ ಮೇಲೆ ಶಂಕಿತ ರಾಕೆಟ್ ದಾಳಿ ನಡೆದಿದ್ದು, ಇದರಲ್ಲಿ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 7ರ ಮಂಗಳವಾರ ಮುಂಜಾನೆ ಸುಮಾರು 1:00 ಗಂಟೆಯ ಸುಮಾರಿಗೆ, ಬಿಷ್ಣುಪುರ ಮತ್ತು ಚುರಾಚಂದ್ಪುರ ಜಿಲ್ಲೆಗಳ ಗಡಿ ಭಾಗದಲ್ಲಿರುವ ‘ಟ್ರೊಂಗ್ಲಾಬಿ ಅವಾಂಗ್ ಲೈಕೈ’ ಎಂಬ ಗ್ರಾಮದ ಮೇಲೆ ದುಷ್ಕರ್ಮಿಗಳು ಬೆಟ್ಟದ ಮೇಲಿನಿಂದ ಅತ್ಯಾಧುನಿಕ ರಾಕೆಟ್ ಅಥವಾ ಮೋರ್ಟಾರ್ ದಾಳಿ ನಡೆಸಿದ್ದಾರೆ. ಈ ದಾಳಿಯು ನೇರವಾಗಿ ಓನಾಮ್ ಮಲೆಮ್ಂಗನ್ಬಾ ಎಂಬುವವರ ಮನೆಯ ಮೇಲೆ ಬಿದ್ದಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ.
ದಾಳಿಯ ವೇಳೆ ಗಾಢ ನಿದ್ರೆಯಲ್ಲಿದ್ದ 5 ವರ್ಷದ ಗಂಡು ಮಗು ಮತ್ತು ಕೇವಲ 5 ತಿಂಗಳ ಹಸುಗೂಸು ಸ್ಥಳದಲ್ಲೇ ಮೃತಪಟ್ಟಿವೆ. ಮಕ್ಕಳ ತಾಯಿ ಓನಾಮ್ ಓಂಗ್ಬಿ ಬಿನಿತಾ (37) ಅವರು ದೇಹದಾದ್ಯಂತ ತೀವ್ರ ಗಾಯಗಳಾಗಿದ್ದು, ಪ್ರಸ್ತುತ ಇಂಫಾಲದ ರಾಜ್ ಮೆಡಿಸಿಟಿಯ ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಕ್ಕಳ ತಂದೆ ಸಿಐಎಸ್ಎಫ್ (CISF) ಸಿಬ್ಬಂದಿಯಾಗಿದ್ದು, ಪ್ರಸ್ತುತ ಬಿಹಾರದಲ್ಲಿ ಕರ್ತವ್ಯದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಮಣಿಪುರದ ಸಚಿವ ವೈ. ಖೇಮಚಂದ್ ಸಿಂಗ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ದಾಳಿಯನ್ನು ಕಟುವಾಗಿ ಟೀಕಿಸಿರುವ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ನಡುವೆ, ಹೆಚ್ಚಿನ ಹಿಂಸಾಚಾರ ತಡೆಯಲು ಸಮೀಪದ ಜಿಲ್ಲೆಗಳಲ್ಲಿ ಹೆಚ್ಚುವರಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.