Connect with us

LATEST NEWS

ತೌಕ್ತೆ ಹೊಡೆತಕ್ಕೆ ಸಿಲುಕಿದ ಎರಡು ಬೋಟ್​ಗಳು: 5 ಮಂದಿ ನಾಪತ್ತೆ

ಮಂಗಳೂರು, ಮೇ 16: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಎರಡು ಬೋಟ್​ಗಳು ಮಂಗಳೂರಿನ ಆಳ ಸಮುದ್ರದಲ್ಲಿ ಸಿಲುಕಿಹಾಕಿಕೊಂಡಿವೆ ಎನ್ನಲಾಗುತ್ತಿದೆ. ಒಂದು ಬೋಟ್​ನಲ್ಲಿದ್ದ 5 ಮಂದಿ ನಾಪತ್ತೆಯಾಗಿದ್ದು 9 ಮಂದಿಯಿರುವ ಮತ್ತೊಂದು ಬೋಟ್ ಅಪಾಯಕ್ಕೆ ಸಿಲುಕಿದೆ ಎಂದು ತಿಳಿದು ಬಂದಿದೆ.

ನವಮಂಗಳೂರು ಬಂದರಿನಿಂದ ಹೊರಟಿದ್ದ ಎಂಆರ್​ಪಿಎಲ್​ಗೆ ಸಂಬಂಧಿಸಿದ ತೇಲು ಜೆಟ್ಟಿ ನಿರ್ವಹಣೆ ಮಾಡುವ ಬೋಟ್ ಚಂಡಮಾರುತಕ್ಕೆ ಸಿಲುಕಿದೆ. ಎರಡು ಬೋಟ್​ಗಳು ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದು ಇದರಲ್ಲಿ 17 ಮಂದಿ ಇದ್ದರು.

ಒಂದು ಬೋಟ್​ನಲ್ಲಿ 9 ಮತ್ತು ಇನ್ನೊಂದು ಬೋಟ್​ನಲ್ಲಿ 8 ಮಂದಿ ಇದ್ದರು. ಇದರಲ್ಲಿ 8 ಮಂದಿ ಇದ್ದ ಬೋಟ್​​ನಲ್ಲಿದ್ದವರು ಸಮುದ್ರಕ್ಕೆ ಬಿದ್ದಿದ್ದು ಇಬ್ಬರು ಈಜಿಕೊಂಡು ಉಡುಪಿ ಜಿಲ್ಲೆಯ ಮಟ್ಟುವಿನಲ್ಲಿ ದಡ ಸೇರಿದ್ದಾರೆ. ಓರ್ವನ ಮೃತದೇಹ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ದೊರೆತಿದೆ. ಉಳಿದ 5 ಮಂದಿಯ ಶೋಧ ಕಾರ್ಯ‌ಮುಂದುವರಿದಿದೆ.

ಇದರ ಜೊತೆಗಿದ್ದ ಮತ್ತೊಂದು ಬೋಟ್ ಕೂಡ ಅಪಾಯದಲ್ಲಿದೆ. ಇದರಲ್ಲಿ 9 ಮಂದಿ ಇದ್ದು ಇವರು ಬೋಟ್​ನಲ್ಲಿ ಸಮುದ್ರ ಮಧ್ಯೆ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ರಾತ್ರಿಯಾಗಿರುವುದರಿಂದ ಕಾರ್ಯಾಚರಣೆ ಅಸಾಧ್ಯವಾಗಿದ್ದು ನಾಳೆ ಬೆಳಗ್ಗೆ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಣೆ ಮಾಡಲು ನಿರ್ಧರಿಸಲಾಗಿದೆ.