ಉಡುಪಿ ನವೆಂಬರ್ 21: ಭಾರತೀಯ ನೌಕಾ ಪಡೆ ಗೆ ಸಂಬಂಧಿಸಿದ  ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ ಆರೋಪದ ಮೇಲೆ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನ ಮಲ್ಪೆ ಘಟಕದಲ್ಲಿ ಕೆಲಸ ಮಾಡುತ್ತಿರುವ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಉಡುಪಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ರೋಹಿತ್ ಮತ್ತು ಸಂತ್ರಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಉತ್ತರ ಪ್ರದೇಶದವರು.


ಆರೋಪಿಗಳನ್ನು ಸುಷ್ಮಾ ಮೆರೈನ್ ಪ್ರೈವೇಟ್ ಲಿಮಿಟೆಡ್ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿತ್ತು. ಕೇರಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೊಚ್ಚಿನ್ ಶಿಪ್‌ಯಾರ್ಡ್, ಭಾರತೀಯ ನೌಕಾಪಡೆಗೆ ಟಗ್ ಹಡಗುಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಹಡಗುಗಳನ್ನು ನಿರ್ಮಿಸುವಲ್ಲಿ ತೊಡಗಿರುವ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಆರೋಪಿಗಳು ಹಡಗುಗಳಿಗೆ ಸಂಬಂಧಿಸಿದ ಗೋಪ್ಯ ಮಾಹಿತಿ, ರಹಸ್ಯ ತಾಂತ್ರಿಕ ಮಾಹಿತಿಗಳನ್ನು ವಾಟ್ಸ್​ಆ್ಯಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎಂಬ ಗಂಭೀರ ವಿಚಾರ ಈಗ ಬಯಲಾಗಿದೆ. ಕೇರಳದಲ್ಲಿ ಕೆಲಸ ಮಾಡುವ ಸಮಯದಲ್ಲಿ ರೋಹಿತ್ ಹಲವು ಬಾರಿ ಮಾಹಿತಿ ಹಂಚಿಕೊಂಡಿದ್ದು, ಮಲ್ಪೆಗೆ ಬರುವವರೆಗೂ ಈ ಚಟುವಟಿಕೆ ಮುಂದುವರಿದಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

Read This – ಉಡುಪಿ – ಆನ್ಲೈನ್ ಟಾಸ್ಕ್ ನಂಬಿ 12 ಲಕ್ಷ ಕಳೆದುಕೊಂಡ ಯುವಕ

ಈ ಕುರಿತು ಕೊಚ್ಚಿನ್ ಶಿಪ್ ಯಾರ್ಡ್ ಸಿಇಒ ನೀಡಿದ ದೂರಿನ ಆಧಾರದಲ್ಲಿ ಉಡುಪಿ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರ ವಿರುದ್ಧ ದೇಶದ ಸಾರ್ವಭೌಮತೆಗೆ ಧಕ್ಕೆ ತರುವ, ಗೌಪ್ಯ ಮಾಹಿತಿ ಮಾರಾಟ ನಡೆಸಿದ ಆರೋಪಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಮಾಹಿತಿ ಹಂಚಿಕೆ ಮಾಡಿ ಹಣ ಪಡೆಯುತ್ತಿದ್ದರೆಂಬ ಅಂಶವೂ ತನಿಖೆಯಿಂದ ಬೆಳಕಿಗೆ ಬಂದಿದೆ.

Share Information