Connect with us

LATEST NEWS

ದೀಪಾವಳಿ ಪಟಾಕಿ ವಿಚಾರ – ಟ್ವೀಟರ್ ನಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ದ ಆಕ್ರೋಶ

ಬೆಂಗಳೂರು ನವೆಂಬರ್ 18: ದೀಪಾವಳಿ ಸಂದರ್ಭ ಪಟಾಕಿ ಸಿಡಿಸಬೇಕೆ ಬೇಡವೆ ಎನ್ನುವ ವಿಚಾರದಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಟ್ವಿಟರ್ ಅಕೌಂಟ್ ಟ್ರೂಇಂಡಾಲಜಿ ನಡುವೆ ನಡೆದ ಚರ್ಚೆ ಕೊನೆಗೆ ಟ್ರೂ ಇಂಡಾಲಜಿ ಅಕೌಂಟ್ ನ್ನು ಅಮಾನತು ಮಾಡುವ ಹಂತಕ್ಕೆ ಬಂದು ತಲುಪಿದೆ.


ಈಗಾಗಲೇ ದೀಪಾವಳಿ ಸಂದರ್ಭದಲ್ಲಿ ದೇಶದ ಅನೇಕ ರಾಜ್ಯಗಳ ಪಟಾಕಿ ನಿಷೇಧಿಸಿ ಆದೇಶಿಸಿವೆ. ಇದೇ ವಿಚಾರದಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿ ಡಿ. ರೂಪಾ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಹಿಂದೂ ಧರ್ಮದಲ್ಲಿ ದೀಪಾವಳಿ ಸಂದರ್ಭ ಪಟಾಕಿ ಸಿಡಿಸುವ ಬಗ್ಗೆ ಉಲ್ಲೇಖಿಸಿಲ್ಲ ಎಂದು ಬರೆದು ಕೊಂಡಿದ್ದರು. ಆದರ ನಂತರ ಸಂಪೂರ್ಣ ಇಡೀ ದಿನ ಐಪಿಎಸ್ ಅಧಿಕಾರಿ ರೂಪಾ ಹಾಗೂ ಟ್ರೂಇಂಡಾಲಜಿ ಸೇರಿದಂತೆ ಅನೇಕ ಟ್ವೀಟರ್ ಅಕೌಂಟ್‌ ಗಳ ನಡುವೆ ದೊಡ್ಡ ಮಟ್ಟದ ಚರ್ಚೆ ನಡೆದಿದೆ.


ಅನೇಕ ವಿಷಯಗಳು ಈ ಚರ್ಚೆಯಲ್ಲಿ ವಿನಿಮವಾಗಿದ್ದು, ಐಪಿಎಸ್ ಅಧಿಕಾರಿ ರೂಪಾ ಅವರಿಗೆ ಬೆಂಬಲವಾಗಿ ಅನೇಕ ಟ್ವೀಟ್ ಗಳು ಆಗಮಿಸಿದ್ದವು. ಈ ನಡುವೆ ಟ್ವಿಟರ್ ಅಕೌಂಟ್ ಟ್ರೂಇಂಡಾಲಜಿ ಹಾಗೂ ರೂಪಾ ಅವರ ನಡುವೆ ದೊಡ್ಡ ಮಟ್ಟದ ಚರ್ಚೆ ನಡೆದಿದ್ದು, ಇಡೀ ದಿನದ ಚರ್ಚೆಗಳ ನಂತರ ಟ್ವಿಟರ್ ಟ್ರೂಇಂಡಾಲಜಿ ಅಕೌಂಟ್ ನ್ನು ಅಮಾನತು ಮಾಡಿದೆ.


ಇದು ನೆಟ್ಟಿಗರ ಸಿಟ್ಟಿಗೆ ಕಾರಣವಾಗಿತ್ತು. ಒಂದು ಆರೋಗ್ಯ ಪೂರ್ಣ ಚರ್ಚೆಯಲ್ಲಿ ಯಾವುದೇ ರೀತಿಯ ಕಾನೂನಿಗೆ ವಿರುದ್ದವಾದ ವಾಗ್ವಾದ ನಡೆಯದೇ ಇದ್ದರೂ ಟ್ವಿಟರ್ ಮಾತ್ರ ಟ್ರೂಇಂಡಾಲಜಿ ಅಕೌಂಟ್ ನ್ನು ಅಮಾನತು ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ #BringBackTrueIndology ಎಂದು ಅಭಿಯಾನ ಆರಂಭಸಲಾಗಿದೆ. ಈ ಅಭಿಯಾನಕ್ಕೆ ಸಾವಿರಾರು ಜನರು ತಮ್ಮ ಅನಿಸಿಕೆ ನೀಡಿದ್ದು, ಟ್ರೂಇಂಡಾಲಜಿ ಅಕೌಂಟ್ ನಿಜವಾದ ಸಂಗತಿಯನ್ನು ನೀಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ನಡುವೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಕೂಡ #BringBackTrueIndology ಅಭಿಯಾನಕ್ಕೆ ತಮ್ಮ ಬೆಂಬಲ ಸೂಚಿಸಿದ್ದು, ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಟ್ವಿಟರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಕಂಗನಾ ಎಂಟ್ರಿ ಕೊಡಲು ಕಾರಣವೇನೆಂದರೆ, ಡಿ.ರೂಪಾ ಅವರು ತಮ್ಮ ಪೋಸ್ಟ್​ ವಿರುದ್ಧ ಕಮೆಂಟ್​ ಹಾಕಿರುವವರ ಟ್ವಿಟರ್​ ಖಾತೆಯನ್ನು ಬ್ಲಾಕ್​ ಮಾಡುವುದಾಗಿ ಹೇಳಿದ್ದ ಕಾರಣ. ‘ಅರ್ಧಂಬರ್ಧ ಜ್ಞಾನದೊಂದಿಗೆ ಜನರ ಹಾದಿ ತಪ್ಪಿಸುವಿರಿ. ನೀವು ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಹಾಗೂ ಆದೇಶದ ಬಗ್ಗೆ ಗೌರವವನ್ನೂ ತೋರುತ್ತಿಲ್ಲ, ನಿಮ್ಮಂಥ ಟ್ರೋಲರ್‌ಗಳೊಂದಿಗೆ ಚರ್ಚೆ ಮುಂದುವರಿಸುವುದು ಅನವಶ್ಯಕ’ ಎಂದು ರೂಪಾ ಟ್ವೀಟಿಸಿದ್ದು, ಕೆಲವು ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುತ್ತೇನೆ ಎಂದಿದ್ದರು.

ಈ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿ ‘ಪುರಾಣಗಳಲ್ಲಿ ಪಟಾಕಿಯ ಪ್ರಸ್ತಾಪವಿರುವ ಬಗ್ಗೆ ದಾಖಲೆಗಳನ್ನು ಒದಗಿಸಿದ್ದರೂ, ಅವುಗಳನ್ನು ರೂಪಾ ಅವರು ಒಪ್ಪಲಿಲ್ಲ. ಬದಲಿಗೆ ಬ್ಲಾಕ್​ ಮಾಡುವುದಾಗಿ ಹೇಳುತ್ತಿದ್ದಾರೆ ಎಂದಿದ್ದಾರೆ.

ಈ ಮಾತಿಗೆ ಸಮ್ಮತಿ ಸೂಚಿಸಿರುವ ನಟಿ ಕಂಗನಾ’ ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಡಿ.ರೂಪಾ ಅವರಂತಹ ಜನರನ್ನು ನೇಮಿಸುತ್ತದೆ. ಆದರೆ, ಅವರು ನೋಡಿದರೆ ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲುವ ಬದಲು ಖಾತೆಗಳನ್ನೇ ಬ್ಲಾಕ್​ ಮಾಡಿದ್ದಾರೆ, ನಿಮಗೆ ನಾಚಿಗೆಯಾಗಬೇಕು’ ಎಂದಿದ್ದಾರೆ.

ಅಷ್ಟು ಸಾಲದು ಎಂಬಂತೆ, ‘ಮೀಸಲಾತಿಯ ಅಡ್ಡ ಪರಿಣಾಮಕ್ಕೆ ಉದಾಹರಣೆ ಇದು. ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಶಮನಗೊಳಿಸುವ ಕಾರ್ಯಕ್ಕಿಂತ ಘಾಸಿ ಮಾಡುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಏನೊಂದೂ ತಿಳಿದಿಲ್ಲ, ಆದರೆ ಅವರ ಅಸಾಮರ್ಥ್ಯದಿಂದಾಗಿ ಹತಾಶೆ ಹೊರಬರುತ್ತಿರುವುದು ಖಂಡಿತ’ ಎಂದಿದ್ದಾರೆ.

ಸದ್ಯ ಈ ವಾದ, ಪ್ರತಿವಾದದ ಸರಣಿ ಮುಂದುವರೆದಿದ್ದು, ಎಲ್ಲಿಯವರೆಗೆ ಬಂದು ನಿಲ್ಲುತ್ತದೋ ಸದ್ಯಕ್ಕಂತೂ ಗೊತ್ತಿಲ್ಲ…

Facebook Comments

comments