Connect with us

    LATEST NEWS

    ಲವ್ ಜಿಹಾದ್ ಪ್ರಕರಣದಲ್ಲಿ ಟ್ವಿಸ್ಟ್..62ರ ಮುದುಕನ ಮೇಲೆ ಬಿತ್ತು ಅತ್ಯಾಚಾರ ಕೇಸ್

    ಮಂಗಳೂರು ಮಾರ್ಚ್ 25: ಮಂಗಳೂರಿನಲ್ಲಿ ನಡೆದ ವಿಭಿನ್ನ ಲವ್ ಜಿಹಾದ್ ಎಂದು ಹೇಳಲಾದ ಪ್ರಕರಣವೊಂದು ಈಗ ತಿರುವು ಪಡೆದುಕೊಂಡಿದ್ದು ಮುಸ್ಲಿಂ ಮಹಿಳೆಯನ್ನು ಮದುವೆಯಾದ 62 ವರ್ಷದ ಮದುಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

    ಬೋಳಾರದ ಗಂಗಾಧರ ಎಂಬಾತನ ವಿರುದ್ಧ ಈಗ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಆತನಿಗೆ ಮೂರು ಮದುವೆಯಾಗಿದೆ, ಇನ್ನೂ ಹಲವು ಮಹಿಳೆಯರನ್ನು ವಂಚಿಸಿರುವ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


    ಮತಾಂತರಗೊಳಿಸಿ ಮುಸ್ಲಿಂ ಯುವತಿಯೊಂದಿಗೆ ತನ್ನ ಗಂಡನಿಗೆ ಮದುವೆ ಮಾಡಿಸಲಾಗಿದೆ ಎಂದು ಪಾಂಡೇಶ್ವರ ಠಾಣೆಗೆ ಗೃಹಿಣಿಯೊಬ್ಬರು ದೂರು ದಾಖಲಿಸಿರುವ ಸಂಗತಿ ಇದೀಗ ಹೊಸ ತಿರುವು ಪಡೆದುಕೊಂಡಿದೆ. ತನ್ನ ಪತಿ ಗಂಗಾಧರ ಅವರನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ಮುಸ್ಲಿಂ ಯುವತಿಯೊಂದಿಗೆ ಮದುವೆ ಮಾಡಿಕೊಡಲಾಗಿದೆ ಎಂದು ದೂರು ನೀಡಿದ ಬೆನ್ನಲ್ಲೇ ವಿಚಾರಣೇ ಆರಂಭಿಸಿದ ಪೊಲೀಸರಿಗೆ ಹಲವು ನಿಗೂಢ ಸತ್ಯಗಳು ಹೊರಬಂದಿವೆ. ಗಂಗಾಧರ ಮದುವೆಯಾಗಿದ್ದಾನೆ ಎನ್ನಲಾಗಿರುವ ಮುಸ್ಲಿಂ ಯುವತಿಯೇ ಕದ್ರಿ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ.

    ಗಂಗಾಧರ ಆಕೆಯನ್ನು ಕೆಲ ತಿಂಗಳ ಹಿಂದೆ ತನ್ನ ಮಿತ್ರರಾದ ಸೈಯದ್‌, ಶಬೀರ್‌ ಮತ್ತು ಮಹಮ್ಮದ್‌ ಎಂಬವರೊಂದಿಗೆ ಸಂಪರ್ಕಿಸಿ, ತನ್ನ ಹೆಸರು ಮಹಮ್ಮದ್‌ ಅನೀಸ್‌ ಎಂದು ಪರಿಚಯಿಸಿದ್ದ. 22ರ ಹರೆಯದ ಯುವತಿ ಮೂಲತಃ ಪುತ್ತೂರಿನವಳಾಗಿದ್ದು ಹಿಂದೆ ಮದುವೆಯಾಗಿ ಗಂಡ ಮೃತಪಟ್ಟಿದ್ದ, ಒಂದು ಮಗುವಿದೆ. ಆತನ ಮಿತ್ರರೂ ಆಕೆಯನ್ನು ಅನೀಸ್‌ಗೆ ತರಕಾರಿ ವ್ಯಾಪಾರ ಇದೆ, ಕುಟುಂಬದ ಜವಾಬ್ದಾರಿಯ ಒತ್ತಡದಿಂದ ಮದುವೆಯಾಗಿರಲಿಲ್ಲ. ಈಗ ವಿವಾಹವಾಗುತ್ತಿದ್ದಾನೆ, ನಿನ್ನ ಜೀವನವೂ ಒಳ್ಳಯದಾಗುತ್ತದೆ ಎಂದು ನಂಬಿಸಿದ್ದರು.

    ಅದರಂತೆ ಕಳೆದ ವರ್ಷ ಡಿಸೆಂಬರ್‌ 21ರಂದು ಇಬ್ಬರ ವಿವಾಹ ನಡೆದಿತ್ತು. ಆದರೆ ಆ ಬಳಿಕ ಮಹಿಳೆಗೆ ಈ ವ್ಯಕ್ತಿ ತನ್ನ ಧರ್ಮದವನಲ್ಲ, ಅಲ್ಲದೆ ಬೇರೆ ಅಕ್ರಮ ಸಂಬಂಧಗಳೂ ಇವೆ ಎನ್ನುವುದು ಗೊತ್ತಾದ ಬಳಿಕ ಆತನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದಾಳೆ. ಆದರೆ ಬಲಾತ್ಕಾರವಾಗಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಎರಡು ತಿಂಗಳ ಗರ್ಭಿಣಿಯಾದ ಬಳಿಕ ಲೇಡಿಗೋಶನ್‌ಗೆ ಕರೆದೊಯ್ದು ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳೆ ದೂರಿತ್ತಿದ್ದಾರೆ. ಆದರೆ ಮಾರ್ಚ್ 23 ರಂದು ಗಂಗಾಧರನ ಮೊದಲ ಪತ್ನಿ ಯಶೋಧಾ ತನ್ನ ಗಂಡನನ್ನು ಯಾರೋ ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿ ವಿವಾಹ ನಡೆಸಿದ್ದಾರೆ ಎಂಬ ದೂರು ನೀಡಿದ್ದರು.

    ಪೊಲೀಸರು ಗಂಗಾಧರನನ್ನು ಪತ್ತೆ ಮಾಡಿ ಕರೆಯಿಸಿ ವಿಚಾರಣೆ ನಡೆಸಿದಾಗ ವಿಚಾರಗಳು ಬಯಲಾಗಿವೆ. ಈಗ ಆತನ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಾಗಿದ್ದು ದಸ್ತಗಿರಿ ಮಾಡಲಾಗಿದೆ. ತಿಳಿದಿರುವಂತೆ ಈತನಿಗೆ ಎರಡು ವಿವಾಹವಾಗಿದ್ದು ಐವರು ಮಕ್ಕಳಿದ್ದಾರೆ. ಅಲ್ಲದೆ ಇನ್ನೂ ಕೆಲವರನ್ನು ವಂಚಿಸಿ ಮದುವೆಯಾದ ಬಗ್ಗೆ ಮಾಹಿತಿ ಬಂದಿದ್ದು ತನಿಖೆ ನಡೆಸುವುದಾಗಿ ಮಂಗಳೂರು ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ.

    ಈ ಪ್ರಕರಣದ ಸಮಗ್ರ ತನಿಖೆ ನಡೆಸಬೇಕೆಂದು ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಪೊಲೀಸರನ್ನು ಆಗ್ರಹಿಸಿದ್ದರು. ಇದೀಗ ಶರಣ್ ಪಂಪ್ವೆಲ್ಗೆ ತಿರುಗೇಟು ನೀಡಿರುವ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ , ಇಂತಹ ಆರೋಪಿಗಳಿಗೆ ಬೆಂಬಲ ನೀಡುವ ನೀವು, ಲವ್ಜಿಹಾದ್ ಹೆಸರಿನಲ್ಲಿ ಜನತೆಯನ್ನು ಉದ್ವಿಗ್ನಗೊಳಿಸುತ್ತಿರುವುದು ಏಕೆಂದು ಪ್ರಶ್ನಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply