ಚೆನ್ನೈ ಮೇ 09: ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿ ನಾಲ್ಕು ದಿನಗಳೇ ಕಳೆದಿದ್ದರೂ ಸರ್ಕಾರ ರಚನೆಯ ಕಗ್ಗಂಟು ಇನ್ನೂ ಸಡಿಲಗೊಂಡಿಲ್ಲ. ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಮ್ಯಾಜಿಕ್ ನಂಬರ್ 118 ತಲುಪಲು ಇನ್ನೂ ಎರಡು ಸ್ಥಾನಗಳ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ವಿಜಯ್ ಅವರ ಮುಖ್ಯಮಂತ್ರಿ ಹಾದಿ ಅನಿಶ್ಚಿತತೆಯಲ್ಲೇ ಮುಂದುವರಿದಿದೆ.

ಎರಡು ಕ್ಷೇತ್ರಗಳಲ್ಲಿ ಗೆದ್ದಿರುವ ವಿಜಯ್ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಿದಲ್ಲಿ ಟಿವಿಕೆಯ ಬಲ 107ಕ್ಕೆ ಇಳಿಯಲಿದೆ. ಚುನಾವಣೋತ್ತರ ಮೈತ್ರಿಯಲ್ಲಿ ಕಾಂಗ್ರೆಸ್ನ 5 ಶಾಸಕರು ಹಾಗೂ ಎಡಪಕ್ಷಗಳ (CPI ಮತ್ತು CPI-M) ತಲಾ ಇಬ್ಬರು ಶಾಸಕರ ಬೆಂಬಲದೊಂದಿಗೆ ಟಿವಿಕೆಯ ಸಂಖ್ಯಾಬಲ 116ಕ್ಕೆ ತಲುಪಿದೆ. ಆದರೆ, ಸರ್ಕಾರ ರಚನೆಗೆ ಇನ್ನೂ ಇಬ್ಬರು ಶಾಸಕರ ಬೆಂಬಲ ಅನಿವಾರ್ಯವಾಗಿದೆ.

ಶುಕ್ರವಾರ ಮೂರನೇ ಬಾರಿಗೆ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರನ್ನು ಭೇಟಿ ಮಾಡಿದ ವಿಜಯ್, ಅತಿ ದೊಡ್ಡ ಪಕ್ಷವಾಗಿ ನಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಿಸಿಕೆ (VCK) ಮತ್ತು ಐಯುಎಂಎಲ್ (IUML) ಪಕ್ಷಗಳು ಬೆಂಬಲ ನೀಡಲಿವೆ ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದರಾದರೂ, ಸಂಜೆ ವೇಳೆಗೆ ಐಯುಎಂಎಲ್ ತಾನು ಡಿಎಂಕೆ ಮೈತ್ರಿಯಲ್ಲೇ ಮುಂದುವರಿಯುವುದಾಗಿ ಘೋಷಿಸಿ ಟಿವಿಕೆಗೆ ಶಾಕ್ ನೀಡಿದೆ. ವಿಸಿಕೆ ಕೂಡ ಅಧಿಕೃತವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ.
ಸಂಖ್ಯಾಬಲದ ಕೊರತೆಯಿಂದಾಗಿ ಮೇ 9ರಂದು ನಿಗದಿಯಾಗಿದ್ದ ಪ್ರಮಾಣವಚನ ಸಮಾರಂಭವನ್ನು ಮುಂದೂಡಲಾಗಿದೆ. ರಾಜ್ಯಪಾಲರು ಮೇ 10ರವರೆಗೆ ಕಾಲಾವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಮಾತ್ರ ಅಧಿಕಾರ ಹಂಚಿಕೆ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದು, ಶಾಸಕಾಂಗ ಪಕ್ಷದ ನಾಯಕ ಎಸ್. ರಾಜೇಶ್ ಕುಮಾರ್ ಸಚಿವ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.
ಈ ನಡುವೆ, ಅತಿ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಬೇಕೆಂದು ಕೋರಿ ಟಿವಿಕೆ ಪರ ವಕೀಲರೊಬ್ಬರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ರಾಜಕೀಯ ನಾಟಕೀಯತೆ ಈಗ ನ್ಯಾಯಾಲಯದ ಅಂಗಳಕ್ಕೂ ತಲುಪಿದೆ.