ಪಂಜಾಬ್ ಮಾರ್ಚ್ 11: ವೇಗವಾಗಿ ಬಂದ ಐಷಾರಾಮಿ ಆಡಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಟರ್ಕಿ ಮೂಲದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಸೋಮವಾರ ತಡರಾತ್ರಿ ಜಿರಾಕ್ಪುರದ ವಿಐಪಿ ರಸ್ತೆಯಲ್ಲಿ ಸಂಭವಿಸಿದೆ. ಅಪಘಾತದ ನಂತರ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ.

ಮಾವ್ಲುಡಾ ಎಂದು ಗುರುತಿಸಲಾದ ವಿದೇಶಿ ಮಹಿಳೆ, ತನ್ನ ಸ್ನೇಹಿತ ಅಭಿಷೇಕ್ ಎಂಬುವವರ ಗರ್ಭಿಣಿ ಪತ್ನಿಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಬಂದಿದ್ದರು. ರಾತ್ರಿ ಆಸ್ಪತ್ರೆಯಿಂದ ಹೊರಬಂದು ರಸ್ತೆ ದಾಟುತ್ತಿದ್ದಾಗ, ಅತಿವೇಗವಾಗಿ ಬಂದ ಕಪ್ಪು ಬಣ್ಣದ ಆಡಿ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮಹಿಳೆ ಸುಮಾರು 14 ಅಡಿ ಎತ್ತರಕ್ಕೆ ಚಿಮ್ಮಿ ರಸ್ತೆಯ ಇನ್ನೊಂದು ಬದಿಗೆ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಜೊತೆಯಲ್ಲಿದ್ದ ಅಭಿಷೇಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಪೊಲೀಸ್ ತಂಡವು ಒಂದು ಗಂಟೆ ತಡವಾಗಿ ಸ್ಥಳಕ್ಕೆ ಆಗಮಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟರಲ್ಲೇ ಆರೋಪಿ ಚಾಲಕ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಜಿರಾಕ್ಪುರ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. “ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಕಾರಿನ ನಂಬರ್ ಪ್ಲೇಟ್ ಆಧರಿಸಿ ಚಾಲಕನನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು” ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.