ವಾಷಿಂಗ್ಟನ್/ಟೆಹ್ರಾನ್ ಎಪ್ರಿಲ್ 06: ಹಾರ್ಮುಜ್ ಜಲಸಂಧಿ (Strait of Hormuz) ವಿಚಾರವಾಗಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಸ್ಫೋಟಕ ಹಂತ ತಲುಪಿದೆ. ಇರಾನ್ಗೆ ಕಠಿಣ ಎಚ್ಚರಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಜಲಸಂಧಿಯನ್ನು ಕೂಡಲೇ ಮುಕ್ತಗೊಳಿಸದಿದ್ದರೆ ಇಡೀ ಇರಾನ್ ಅನ್ನು ನರಕವನ್ನಾಗಿಸುತ್ತೇವೆ” ಎಂದು ಗುಡುಗಿದ್ದಾರೆ.

ತಮ್ಮ ‘ಟ್ರುತ್’ (Truth) ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ದಾಳಿಯ ಸಮಯವನ್ನು ಬಹಿರಂಗಪಡಿಸಿದ್ದಾರೆ. ಅಮೆರಿಕದ ಕಾಲಮಾನದ ಪ್ರಕಾರ ಮಂಗಳವಾರ ರಾತ್ರಿ 8 ಗಂಟೆಯೊಳಗೆ (ಭಾರತೀಯ ಕಾಲಮಾನ ಬುಧವಾರ ಬೆಳಿಗ್ಗೆ) ಜಲಸಂಧಿಯನ್ನು ಸಾಗರ ಸಂಚಾರಕ್ಕೆ ಮುಕ್ತಗೊಳಿಸಬೇಕು. ಒಂದು ವೇಳೆ ಇರಾನ್ ಒಪ್ಪಂದಕ್ಕೆ ಬರದಿದ್ದರೆ ವಿದ್ಯುತ್ ಸ್ಥಾವರಗಳು ಹಾಗೂ ಪ್ರಮುಖ ಸೇತುವೆಗಳ ಮೇಲೆ ದಾಳಿ ನಡೆಸಿ ದೇಶವನ್ನೇ ಸರ್ವನಾಶ ಮಾಡುವುದಾಗಿ ಎಚ್ಚರಿಸಿದ್ದಾರೆ.
ಟ್ರಂಪ್ ಬೆದರಿಕೆಗೆ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಾಲಿಬಾಫ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಟ್ರಂಪ್ ಅವರೇ, ನಿಮ್ಮ ಬೇಜವಾಬ್ದಾರಿ ನಡೆಗಳು ಅಮೆರಿಕವನ್ನೇ ನರಕಕ್ಕೆ ತಳ್ಳಲಿವೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಆದೇಶಗಳನ್ನು ಪಾಲಿಸುವ ಮೂಲಕ ನೀವು ಇಡೀ ಮಧ್ಯಪ್ರಾಚ್ಯವನ್ನು ಬೆಂಕಿಗೆ ದೂಡುತ್ತಿದ್ದೀರಿ,” ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಕಿಡಿಕಾರಿದ್ದಾರೆ.