LATEST NEWS
ಬುದ್ದಿವಂತರ ಜಿಲ್ಲೆಯಲ್ಲಿ ಗಬ್ಬು ನಾರುತ್ತಿರುವ ಕಸಬಾ ಗ್ರಾಮದ ಸುಡುಗಾಡು ತೋಡು..ಕೊಳಗೇರಿಯಾಗಿ ಮಾಡಲು ಹೊರಟ ಕುಂದಾಪುರ ಪುರಸಭೆ
ಕುಂದಾಪುರ : ಕೊಳಗೇರಿಯೆಂದರೆ ಮುಂಬೈ ತೋರಿಸುವ ಜನ ಇನ್ನು ಮುಂದೆ ಉಡುಪಿ ಜಿಲ್ಲೆಯ ಕುಂದಾಪುರವನ್ನು ತೋರಿಸುವ ಸಾಧ್ಯತೆ ಇದೆ. ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುರಸಭೆ ವ್ಯಾಪ್ತಿಯ ಈ ಕಸಬಾ ಗ್ರಾಮದ ಜನ ಜೀವನವನ್ನು ಕೊಳಚೆಗಳೇ ಕಿತ್ತು ತಿನ್ನುತ್ತಿದೆ!
ಬೆಳಗ್ಗೆ ಎದ್ದ ಕೂಡಲೇ ಗಬ್ಬು ನಾರುತ್ತಿರುವ ತೋಡಿನ ಗಾಳಿ ಉಸಿರಾಡಿ ಆ ದಿನ ಆರಂಭಿಸಬೇಕಾದ ದುಸ್ಥಿತಿ ಇಲ್ಲಿನ ಜನರದ್ದು. ಹೆಣ್ಣುಮಕ್ಕಳಿಗೆ ಮದುವೆ ಮಾಡಲೂ ಕಷ್ಟದ ಪರಿಸ್ಥಿತಿ ಎದುರಾಗಿದೆ! ಈ ಗ್ರಾಮದ ಯುವತಿಯರನ್ನು ಮದುವೆಯಾಗಲು ಯುವಕರು ಸುಲಭವಾಗಿ ಒಪ್ಪುತಿಲ್ಲ.
ಆಕಸ್ಮಾತ್ ಒಪ್ಪಿದರೂ ಹೆಂಡತಿಯ ಮನೆಗೆ ಬರುವುದಿಲ್ಲವೆಂದು ಅಗ್ರಿಮೆಂಟ್ ಮಾಡಿಕೊಂಡು ಮದುವೆ ಆಗುವ ಪರಿಸ್ಥಿತಿ ಎದುರಾಗಿದೆ! ಆ ಕಡೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟ ಮನೆಯವರು ಮಕ್ಕಳನ್ನು ಮರೆತು ಜೀವನ ಮಾಡುವ ಪರಿಸ್ಥಿತಿ ಈ ಗ್ರಾಮದಲ್ಲಿ ಎದುರಾಗಿದೆ. ತಮ್ಮ ಮನೆಗಳಿಗೆ ನೆಂಟರಿಷ್ಟರು ಬರುತ್ತಾರೆಂದರೆ ಈ ಗ್ರಾಮದ ಜನರಿಗೆ ಭಯ, ನಡುಕ ಹುಟ್ಟುತ್ತದೆ. ಕುಂದಾಪುರ ಪೇಟೆ ಗಳಿಂದ ಹರಿಯುವ ಕೊಳಚೆ ನೀರೆಲ್ಲ ಈ ಸುಡುಗಾಡು ತೋಡಿನ ಮೂಲಕ ಹರಿಯುತ್ತದೆ. ಸರಿಯಾಗಿ ತೋಡುಗಳನ್ನು ಕ್ಲೀನ್ ಮಾಡಲು ಪುರಸಭೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬುದು ಇಲ್ಲಿಯ ಗ್ರಾಮಸ್ಥರ ಅಳಲು, ಆಕ್ರೋಶ.
ಹಲವು ಬಾರಿ ಮನವಿ ಕೊಟ್ಟರೂ ಕೂಡ ನಮ್ಮ ಮಾತಿಗೆ ಕಿಂಚಿತ್ತೂ ಬೆಲೆ ಇಲ್ಲ ಅನ್ನೋದು ಇಲ್ಲಿಯ ಗ್ರಾಮಸ್ಥರ ಒಕ್ಕೊರಲಿನ ಕೂಗಾಗಿದೆ. ಮಲೇರಿಯಾ, ಡೆಂಗ್ಯೂನಿಂದ ಏಳರಿಂದ ಎಂಟು ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ. ಮಕ್ಕಳು, ವಯೋವೃದ್ಧರು ಕೊಳಗೇರಿಯಲ್ಲಿ ಮೂಗು ಮುಚ್ಚಿಕೊಂಡು ಜೀವನ ಮಾಡಬೇಕಾದ ಕಷ್ಟದ ಪರಿಸ್ಥಿತಿ ಎದುರಾಗಿದೆ.
ನಮ್ಮದು ಬುದ್ಧಿವಂತರ ಜಿಲ್ಲೆ ಅಂದುಕೊಂಡಿರುವ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಸರಿ ಸುಮಾರು 100 ಮನೆ, 4000 ಜನರು ವಾಸವಿರುವ ಕಸಬಾ ಗ್ರಾಮದ ಜನರ ಕಣ್ಣೀರನ್ನು ಒರೆಸಲು ಸಾಧ್ಯವಾಗುತ್ತಿಲ್ಲ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.