ವಾಷಿಂಗ್ಟನ್ ಮಾರ್ಚ್ 26: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವು ಈಗ ರಾಜತಾಂತ್ರಿಕ ಮಾತುಕತೆಯಿಂದ ವೈಯಕ್ತಿಕ ವಾಗ್ದಾಳಿಗೆ ಹೊರಳಿದೆ. “ಇರಾನ್ ಒಪ್ಪಂದಕ್ಕಾಗಿ ಅಮೆರಿಕದ ಮುಂದೆ ಬೇಡುತ್ತಿದೆ, ಆದರೆ ಸಾರ್ವಜನಿಕವಾಗಿ ಮಾತ್ರ ಗತ್ತಿನ ಪ್ರದರ್ಶನ ನೀಡುತ್ತಿದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೇವಡಿ ಮಾಡಿದ್ದಾರೆ.

ತಮ್ಮದೇ ಮಾಲೀಕತ್ವದ ‘ಟ್ರೂತ್ ಸೋಷಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ನ ಪ್ರಸ್ತುತ ಸ್ಥಿತಿಯನ್ನು “ಮಿಲಿಟರಿ ಶಕ್ತಿಯಿಂದ ಸಂಪೂರ್ಣವಾಗಿ ಧ್ವಂಸಗೊಂಡ ರಾಷ್ಟ್ರ” ಎಂದು ಬಣ್ಣಿಸಿದ್ದಾರೆ. ಸಮಾಲೋಚನೆ ವೇಳೆ ಇರಾನ್ ಪ್ರತಿನಿಧಿಗಳು ಒಪ್ಪಂದಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ. ಆದರೆ ಹೊರಗಡೆ ಮಾತ್ರ “ನಾವು ಅಮೆರಿಕದ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದೇವೆ” ಎಂದು ಸುಳ್ಳು ಹೇಳುತ್ತಿದ್ದಾರೆ. ಇರಾನ್ನ ಸಂಧಾನಕಾರರನ್ನು ‘ವಿಚಿತ್ರ’ ಮತ್ತು ‘ವಿಭಿನ್ನ’ ವ್ಯಕ್ತಿಗಳು ಎಂದು ಟ್ರಂಪ್ ಕರೆದಿದ್ದಾರೆ.
ತುಂಬಾ ತಡವಾಗುವ ಮೊದಲೇ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದು ಅವರಿಗೆ ಒಳಿತು. ಒಮ್ಮೆ ಪರಿಸ್ಥಿತಿ ಕೈಮೀರಿದರೆ, ಅಲ್ಲಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಆ ಪರಿಣಾಮಗಳು ಸುಂದರವಾಗಿರುವುದಿಲ್ಲ” ಎಂದು ಅವರು ಎಚ್ಚರಿಸಿದ್ದಾರೆ.
ಬುಧವಾರ ವಾಷಿಂಗ್ಟನ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. “ಇರಾನ್ ನಾಯಕರಿಗೆ ಒಪ್ಪಂದ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಆದರೆ ಒಪ್ಪಂದಕ್ಕೆ ಸಹಿ ಹಾಕಿದರೆ ತಮ್ಮದೇ ದೇಶದ ಜನರು ನಮ್ಮನ್ನು ಕೊಲ್ಲಬಹುದು ಎಂಬ ಭಯ ಅವರಿಗಿದೆ. ಅತ್ತ ಅಮೆರಿಕದ ದಾಳಿಯಿಂದಲೂ ಅವರು ಪ್ರಾಣಭಯ ಎದುರಿಸುತ್ತಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.
ಟ್ರಂಪ್ ಅವರ ಈ ಹೇಳಿಕೆಗಳಿಗೆ ವಿರುದ್ಧವಾಗಿ ಇರಾನ್ ವಿದೇಶಾಂಗ ಸಚಿವರು ಪ್ರತ್ಯೇಕ ಹೇಳಿಕೆ ನೀಡಿದ್ದಾರೆ. “ನಾವು ಅಮೆರಿಕದ ಪ್ರಸ್ತಾಪವನ್ನು ತಾಂತ್ರಿಕವಾಗಿ ಪರಿಶೀಲಿಸುತ್ತಿದ್ದೇವೆಯೇ ಹೊರತು, ಸಂಘರ್ಷ ಕೊನೆಗೊಳಿಸಲು ಮಾತುಕತೆ ನಡೆಸುವ ಯಾವುದೇ ಉದ್ದೇಶ ನಮಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಾಲ್ಕು ವಾರಗಳಿಂದ ನಡೆಯುತ್ತಿರುವ ಭೀಕರ ಹೋರಾಟದ ನಡುವೆಯೂ ಇರಾನ್ ತನ್ನ ಪಟ್ಟು ಸಡಿಲಿಸಿಲ್ಲ ಎಂಬ ಚಿತ್ರಣ ನೀಡಲು ಟೆಹ್ರಾನ್ ಪ್ರಯತ್ನಿಸುತ್ತಿದೆ.