ವಾಷಿಂಗ್ಟನ್: ಜಾಗತಿಕ ತೈಲ ಸಾಗಣೆಯ ಜೀವನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಮುಚ್ಚಲು ಸಂಚು ರೂಪಿಸುತ್ತಿರುವ ಇರಾನ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೀಕರ ಎಚ್ಚರಿಕೆ ನೀಡಿದ್ದಾರೆ. “ಒಂದು ವೇಳೆ ತೈಲ ಸಾಗಣೆಗೆ ಅಡ್ಡಿಪಡಿಸಿದರೆ, ಇದುವರೆಗೆ ನಡೆಸಿದ ದಾಳಿಗಿಂತ 20 ಪಟ್ಟು ಕಠಿಣವಾದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ” ಎಂದು ಅವರು ಗುಡುಗಿದ್ದಾರೆ.

ಟ್ರೂತ್ ಸೋಶಿಯಲ್ನಲ್ಲಿ ಎಚ್ಚರಿಕೆ:
ಸೋಮವಾರ ತಮ್ಮ ‘ಟ್ರೂತ್ ಸೋಶಿಯಲ್’ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಹಡಗು ಸಂಚಾರಕ್ಕೆ ಬೆದರಿಕೆ ಹಾಕುತ್ತಿರುವುದನ್ನು ಖಂಡಿಸಿದ್ದಾರೆ. ಅಮೆರಿಕದ ಹಿತಾಸಕ್ತಿ ಮತ್ತು ಜಾಗತಿಕ ಇಂಧನ ಭದ್ರತೆಗೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ದಿನಕ್ಕೆ ಸುಮಾರು 60ಕ್ಕೂ ಹೆಚ್ಚು ಹಡಗುಗಳು ಸಂಚರಿಸುವ ಹಾರ್ಮುಜ್ ಮಾರ್ಗದಲ್ಲಿ, ಇರಾನ್ನ ಬೆದರಿಕೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಕೇವಲ ಎರಡು ಹಡಗುಗಳು ಮಾತ್ರ ಸಂಚರಿಸಿವೆ. ಜಾಗತಿಕ ತೈಲ ಬಳಕೆಯ ಶೇ. 20ರಷ್ಟು ಈ ಮಾರ್ಗದ ಮೂಲಕವೇ ಸಾಗುವುದರಿಂದ, ಈ ಬೆಳವಣಿಗೆಯು ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದೆ.