ವಾಷಿಂಗ್ಟನ್ ಎಪ್ರಿಲ್ 09: ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಘೋಷಣೆಯಾಗಿ ಕೇವಲ 24 ಗಂಟೆಗಳು ಕಳೆಯುವಷ್ಟರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಮತ್ತೊಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ. “ವಾಸ್ತವ ಒಪ್ಪಂದಕ್ಕೆ ಸಹಿ ಬೀಳುವವರೆಗೆ ಇರಾನ್ ಸುತ್ತಮುತ್ತಲಿನ ಅಮೆರಿಕದ ಎಲ್ಲಾ ಯುದ್ಧನೌಕೆಗಳು, ವಿಮಾನಗಳು ಮತ್ತು ಮಿಲಿಟರಿ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿರಲಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಶೂಟಿಂಗ್ ಸ್ಟಾರ್ಟ್ಸ್’ ಎಚ್ಚರಿಕೆ: ಟ್ರೂತ್ ಸೋಶಿಯಲ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡಲು ಇರಾನ್ ಒಪ್ಪಿಕೊಂಡಿದೆ. ಒಂದು ವೇಳೆ ಈ ಮಾತಿನಿಂದ ಹಿಂದೆ ಸರಿದರೆ ಅಥವಾ ಜಲಸಂಧಿಯನ್ನು ಮುಚ್ಚಲು ಪ್ರಯತ್ನಿಸಿದರೆ “ಹಿಂದೆಂದೂ ನೋಡಿರದ ಅತಿದೊಡ್ಡ ದಾಳಿ (Shooting Starts)” ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇಸ್ರೇಲ್ ಮತ್ತು ಲೆಬನಾನ್ ನಡುವಿನ ಸಂಘರ್ಷದ ನೆಪವೊಡ್ಡಿ ಇರಾನ್ ಮತ್ತೆ ಕ್ಯಾತೆ ತೆಗೆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂಬ ಮುನ್ಸೂಚನೆಯನ್ನು ಟ್ರಂಪ್ ನೀಡಿದ್ದಾರೆ. ಇರಾನ್ ಯಾವುದೇ ಪರಮಾಣು ಶಸ್ತ್ರಾಸ್ತ್ರ ಹೊಂದುವಂತಿಲ್ಲ ಎಂಬ ಹಠಕ್ಕೆ ಬಿದ್ದಿರುವ ಟ್ರಂಪ್, ಈ ಬಾರಿ ಒಪ್ಪಂದವು ಕೇವಲ ಕಾಗದದ ಮೇಲಿರದೆ ‘ವಾಸ್ತವ’ವಾಗಿರಬೇಕು ಎಂದು ಒತ್ತಾಯಿಸಿದ್ದಾರೆ.