ವಾಷಿಂಗ್ಟನ್ ಮಾರ್ಚ್ 30: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಶೀಘ್ರದಲ್ಲೇ ಒಪ್ಪಂದಕ್ಕೆ ಬರದಿದ್ದರೆ ಇರಾನ್ನ ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ತೈಲ ಕೇಂದ್ರವಾದ ಖಾರ್ಗ್ ದ್ವೀಪವನ್ನು “ಸಂಪೂರ್ಣವಾಗಿ ನಾಶಮಾಡುವುದಾಗಿ” ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತೀವ್ರ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರೂತ್ ಸೋಶಿಯಲ್’ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, “ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ವ್ಯಾಪಾರಕ್ಕಾಗಿ ಮುಕ್ತಗೊಳಿಸದಿದ್ದರೆ ಮತ್ತು ಒಪ್ಪಂದಕ್ಕೆ ಬರದಿದ್ದರೆ, ನಾವು ಉದ್ದೇಶಪೂರ್ವಕವಾಗಿ ಇದುವರೆಗೆ ಮುಟ್ಟದ ಇರಾನ್ನ ವಿದ್ಯುತ್ ಉತ್ಪಾದನಾ ಘಟಕಗಳು, ತೈಲ ಬಾವಿಗಳು ಮತ್ತು ಉಪ್ಪುನೀರಿನ ಸಂಸ್ಕರಣಾ ಸ್ಥಾವರಗಳನ್ನು ಸ್ಫೋಟಿಸುತ್ತೇವೆ” ಎಂದು ಗುಡುಗಿದ್ದಾರೆ. ಕಳೆದ 47 ವರ್ಷಗಳ ‘ಭಯೋತ್ಪಾದನಾ ಆಳ್ವಿಕೆ’ಯಲ್ಲಿ ಹತರಾದ ಅಮೆರಿಕನ್ ಸೈನಿಕರ ಸಾವಿಗೆ ಇದು ಪ್ರತೀಕಾರವಾಗಲಿದೆ ಎಂದು ಅವರು ಹೇಳಿದ್ದಾರೆ.
ಪೆಂಟಗನ್ ಈಗಾಗಲೇ ಇರಾನ್ನಲ್ಲಿ ನೆಲದ ಕಾರ್ಯಾಚರಣೆಗಾಗಿ ಸಿದ್ಧತೆ ನಡೆಸುತ್ತಿದ್ದು, ಸುಮಾರು 10,000 ಸೈನಿಕರನ್ನು ನಿಯೋಜಿಸುವ ಪ್ರಕ್ರಿಯೆ ಆರಂಭಿಸಿದೆ ಎಂಬ ವರದಿಗಳ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ, ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಜನರಲ್ ಅಮೆರಿಕದ ಬೇಡಿಕೆಗಳನ್ನು ‘ಅವಿವೇಕದ ಬೇಡಿಕೆಗಳು’ ಎಂದು ಕರೆದಿದ್ದು, ನೇರ ಮಾತುಕತೆಯನ್ನು ನಿರಾಕರಿಸಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಹಿಡಿತ ಸಾಧಿಸಲು ಯತ್ನಿಸುತ್ತಿರುವುದು ಈ ಎಲ್ಲಾ ಬಿಕ್ಕಟ್ಟಿಗೆ ಕಾರಣವಾಗಿದೆ.