ಅನಂತ್‌ನಾಗ್, ನವೆಂಬರ್ 08: ಬಿಜ್‌ಬೆಹರಾ ಮತ್ತು ಅನಂತ್‌ನಾಗ್ ನಡುವೆ ಚಲಿಸುತ್ತಿದ್ದ ರೈಲಿನ ಎಂಜಿನ್ ಮುಂಭಾದ ಗ್ಲಾಸ್ ಗೆ ಹದ್ದೊಂದು ಡಿಕ್ಕಿ ಹೊಡೆದ ಪರಿಣಾಮ ರೈಲಿನ ಗ್ಲಾಸ್ ಪುಡಿಯಾಗಿದ್ದು, ಲೋಕೋಪೈಲೆಟ್ ಗಾಯಗೊಂಡ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ರೈಲು ಬಾರಾಮುಲ್ಲಾದಿಂದ ಬನಿಹಾಲ್‌ಗೆ ಸಂಚರಿಸುತ್ತಿದ್ದು, ಈ ವೇಳೆ ಹದ್ದು ರೈಲಿನ ಗ್ಲಾಸ್ ಗೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ರೈಲಿನ ಗ್ಲಾಸ್ ಪುಡಿಪುಡಿಯಾಗಿ ಲೋಕೋಮೋಟಿವ್ ಪೈಲಟ್ ವಿಶಾಲ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಬಳಿಕ ಅನಂತ್‌ನಾಗ್ ರೈಲ್ವೆ ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ನಂತರ ರೈಲನ್ನು ಅನಂತ್‌ನಾಗ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಮತ್ತು ಅಗತ್ಯ ತಪಾಸಣೆಯ ನಂತರ ರೈಲು ತನ್ನ ಪ್ರಯಾಣವನ್ನು ಪುನರಾರಂಭಿಸಲಿದೆ ಎಂದು ಅಧಿಕಾರಿ ದೃಢಪಡಿಸಿದ್ದಾರೆ.



