ಶಿವಮೊಗ್ಗ, ಮಾರ್ಚ್ 20 : ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ದಾರುಣವಾಗಿ ಮೃತಪಟ್ಟಿದ್ದಾರೆ. ದೇಹದ ಉಷ್ಣತೆಯನ್ನು ಪರೀಕ್ಷಿಸಲು ತೆರಳಿದ್ದ ವೇಳೆ ಗರ್ಭಿಣಿ ನೀರಾನೆ ದಾಳಿ ನಡೆಸಿದ್ದು, ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಅರಣ್ಯ ಸಚಿವರಿಂದ ತನಿಖಗೆ ಆದೇಶವಾಗಿದೆ.

ಮೃತಪಶುವೈದ್ಯೆ ಮಾರ್ಚ್ 19 ಗುರುವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಮೃಗಾಲಯದ ಆಸ್ಪತ್ರೆಯಲ್ಲಿ ಹಕ್ಕಿಗೆ ಚಿಕಿತ್ಸೆ ನೀಡಲು ತೆರಳಿದ್ದರು. ನಂತರ ಗರ್ಭಿಣಿ ನೀರಾನೆಯ ಆರೋಗ್ಯ ಪರಿಶೀಲನೆಗಾಗಿ ಮತ್ತು ಥರ್ಮಲ್ ಕ್ಯಾಮೆರಾ ಮೂಲಕ ದೇಹದ ಉಷ್ಣಾಂಶವನ್ನು ಪರೀಕ್ಷಿಸಲು ಆವರಣದಲ್ಲಿ ಹೋದಾಗ, ನೀರಾನೆ ಏಕಾಏಕಿ ದಾಳಿ ಮಾಡಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡ ಡಾ. ಸಮೀಕ್ಷಾಗೆ ತಕ್ಷಣವೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ನೀರಾನೆ ದಾಳಿಯಿಂದ ಪಶು ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದು ಶೋಕ ವ್ಯಕ್ತಪಡಿಸಿರುವ ಅವರು, ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯ. ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಮೃತ ಯುವ ವೈದ್ಯೆಯ ಕುಟುಂಬದವರಿಗೆ ನಿಯಮಾನುಸಾರ ಕೂಡಲೇ ಪರಿಹಾರ ನೀಡುವಂತೆ ಸೂಚಿಸಿರುವ ಅವರು, ರಾಜ್ಯದ ಎಲ್ಲ ಮೃಗಾಲಯಗಳಲ್ಲಿರುವ ಪಶುವೈದ್ಯರು ಯಾವುದೇ ವನ್ಯಜೀವಿಗೆ ಚಿಕಿತ್ಸೆ ನೀಡುವಾಗ ಪ್ರಮಾಣಿತ ಮಾನದಂಡ (ಎಸ್.ಓ.ಪಿ.) ಪಾಲಿಸಬೇಕು ಎಂದೂ ಸೂಚನೆ ನೀಡಿದ್ದಾರೆ.