LATEST NEWS
ಮಂಗಳೂರಿನಲ್ಲಿ ಈಗ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ….!!

ಮಂಗಳೂರು ನವೆಂಬರ್ 9: ಹಂಪನಕಟ್ಟೆ ರಸ್ತೆ ಕಾಂಕ್ರೀಟಿಕರಣ ಮತ್ತು ಒಳಚರಂಡಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆ ಸಂಚಾರ ನಿಷೇಧಿಸಿರುವುದು ಮಂಗಳೂರು ಜನರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇಡೀ ದಿನ ಮಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಸಂಕಷ್ಟಪಡುವಂತಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಗರದ ಹಂಪನಕಟ್ಟೆ ರಸ್ತೆ ಕಾಂಕ್ರೀಟಿಕರಣ ಮತ್ತು ಒಳಚರಂಡಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಹಂಪನಕಟ್ಟೆ ಸುತ್ತಮುತ್ತ ವಾಹನ ಸಂಚಾರ ನಿಷೇಧಿಸಲಾಗಿತ್ತು. ಅಲ್ಲದೆ ಹಂಪನಕಟ್ಟೆ ಕಡೆಯಿಂದ ನವಭಾರತ್ ವೃತ್ತ ಕಡೆಗೆ ಏಕಮುಖ ವಾಹನ ಸಂಚಾರ ಇರಲಿದೆ. ನವಭಾರತ್ ಸರ್ಕಲ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಪ್ರವೇಶಿಸುವ ಎಲ್ಲ ವಾಹನ ಸಂಚಾರ ನಿಷೇಧಿಸಲಾಗಿದೆ.

ಈ ಹಿನ್ನಲೆ ಮಂಗಳೂರು ನಗರದ ಸುತ್ತಲೂ ವಾಹನ ದಟ್ಟಣೆ ಕಂಡು ಬಂದು ವಾಹನ ಸವಾರರು ಪರದಾಡುವಂತಾಗಿದೆ. ವಾಹನ ಸವಾರರು ದಾವಾಂತದಲ್ಲಿ ಎಲ್ಲೆಲ್ಲಿ ವಾಹನಗಳನ್ನು ನುಗ್ಗಿಸಿ ಹೊರಟರೂ ಎತ್ತ ಕಡೆಗಳಲ್ಲಿ ನೋಡಿದರೂ ಬ್ಯಾರಿಕೇಡ್ಗಳನ್ನು ಹಾಕಿ ಪೊಲೀಸ್ ಬಿಗಿಬಂದೋಬಸ್ತ್ ಇರುವುದರಿಂದ ಬಂದ ದಾರಿಗೆ ಸುಂಕವಿಲ್ಲವೆಂಬಂತ ಪರಿಸ್ಥಿತಿ ಉಂಟಾಗಿದೆ. ಅಲ್ಲದೆ ಎಲ್ಲಾ ಕಡೆಗಳಲ್ಲಿ ರಸ್ತೆ ಅಗೆದು ಏಕಕಾಲದಲ್ಲಿ ಕಾಮಗಾರಿ ನಡೆಸುತ್ತಿರುವ ಜಿಲ್ಲಾಡಳಿತದ ವೈಖರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.