ಭುವನೇಶ್ವರ ಡಿಸೆಂಬರ್ 25 : ನಕ್ಸಲ್ ನಾಯಕರ ವಿರುದ್ದ ನಡೆಯುತ್ತಿರುವ ಕಾರ್ಯಾಚರಣೆ ಮುಂದುವರೆದಿದ್ದು, ಈಗಾಗಲೇ ಹಲವು ಪ್ರಮುಖ ನಾಯಕರ ಒಂದೋ ಶರಣಾಗಿದ್ದಾರೆ. ಇಲ್ಲವೇ, ಎನ್ ಕೌಂಟರ್ ನಲ್ಲಿ ಸಾವನಪ್ಪಿದ್ದಾರೆ. ಇದೀಗ ಭದ್ರತಾ ಪಡೆಗಳ ಗುಂಡೇಟಿಗೆ ಒಡಿಶಾದಲ್ಲಿ ಬರೊಬ್ಬರಿ 1.1 ಕೋಟಿ ರೂ ಇನಾಮು ಹೊಂದಿದ್ದ ನಕ್ಸಲ್ ನಾಯಕ ಗಣೇಶ್ ಉಯ್ಕೆಯನ್ನು ಹೊಡೆದುರುಳಿಸಲಾಗಿದೆ.


ಒಡಿಶಾದ ಕಂಧಮಾಲ್‌ನಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಕುಖ್ಯಾತ ನಕ್ಸಲ್ ನಾಯಕ ಗಣೇಶ್ ಉಯ್ಕೆ ಸೇರಿದಂತೆ 4 ಮಂದಿ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಿಗ್ಗೆ 9 ಗಂಟೆಗೆ, ಭದ್ರತಾ ಪಡೆಗಳು ರಂಭಾ ಅರಣ್ಯ ವ್ಯಾಪ್ತಿಯಲ್ಲಿ ಸಶಸ್ತ್ರ ಮಾವೋವಾದಿ ಪಡೆಯನ್ನು ಎದುರಿಸಿತು. ಈ ವೇಳೆ ಮಾವೋವಾದಿಗಳು ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿಗಳೂ ಕೂಡ ಪ್ರತಿ ದಾಳಿ ನಡೆಸಿದರು.

ಮಧ್ಯಾಹ್ನದ ಹೊತ್ತಿಗೆ, ಭದ್ರತಾ ಪಡೆಗಳು ಗಣೇಶ್ ಉಯ್ಕೆ ಸೇರಿದಂತೆ ನಾಲ್ವರು ಮಾವೋವಾದಿಗಳ ಮೃತದೇಹಗಳನ್ನು ಸ್ಥಳದಿಂದ ವಶಪಡಿಸಿಕೊಂಡವು. ಭದ್ರತಾ ಸಿಬ್ಬಂದಿ ಎರಡು INSAS ರೈಫಲ್‌ಗಳು ಮತ್ತು .303 ರೈಫಲ್ ಸೇರಿದಂತೆ ಹೆಚ್ಚಿನ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಸ್ಥಳದಿಂದ ವಶಪಡಿಸಿಕೊಂಡರು.
ಚಕಪಾಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಗುಂಡಿನ ಕಾಳಗದಲ್ಲಿ ಹತನಾದ ಒಬ್ಬ ನಕ್ಸಲನನ್ನು 69 ವರ್ಷದ ಉಯಿಕೆ ಎಂದು ಗುರುತಿಸಲಾಗಿದೆ. ಆತನನ್ನು ಪಕ್ಕ ಹನುಮಂತು ಎಂದೂ ಕರೆಯಲಾಗುತ್ತದೆ.

ಗಣೇಶ್ ಅವರು ತೆಲಂಗಾಣದ ಚೆಂದೈರ್ ಮಂಡಲದ ಪುಲ್ಲೆಮಲ ಹಳ್ಳಿಯ ನಿವಾಸಿಯಾಗಿದ್ದಾರೆ. ಅಂತೆಯೇ ಎನ್ಕೌಂಟರ್ ನಲ್ಲಿ ಹತರಾದ ಮೂವರು ನಕ್ಸಲರ ಮೂಲ ಇನ್ನಷ್ಟೇ ತಿಳಿಯಬೇಕಿದೆ ಎಂದು ಅವರು ತಿಳಿಸಿದ್ದಾರೆ.

Share Information