ಬೆಂಗಳೂರು ನವೆಂಬರ್ 27: 15 ದಿನಗಳ ಹಿಂದೆ ಕೇವಲ 20 ರಿಂದ 30 ರೂಪಾಯಿಗೆ ಸೇಲ್ ಆಗುತ್ತಿದ್ದ ಟೊಮೆಟೊ ಇದೀಗ ಶತಕದತ್ತ ದಾಪುಗಾಲು ಇಟ್ಟಿದೆ. ಇದೀಗ ಟೊಮೆಟೋ ಕೆಜಿಗೆ 80 ರೂಪಾಯಿಯಂತೆ ಮಾರಾಟವಾಗುತ್ತಿದ್ದು, ಟೊಮೆಟೊ ಬೆಳೆಗಾರರಲ್ಲಿ ಸಂತಸ ಮೂಡಿಸಿದ್ದರೆ, ಗ್ರಾಹಕ ಜೇಬಿಗೆ ಕತ್ತರಿ ಬಿದ್ದಿದೆ.


2 ತಿಂಗಳ ಹಿಂದೆ ಟೊಮೆಟೊ ಬೆಲೆ ಕುಸಿತ ಉಂಟಾಗಿ ರಸ್ತೆಗೆ ಹಾಕಿದ್ದ ಬೆಳೆಗಾರರಿಗೆ ಎರಡು ತಿಂಗಳ ಅಂತರದಲ್ಲಿ ಲಾಭ ಹುಡುಕಿಕೊಂಡು ಬರುತ್ತಿದೆ. ಮನೆಯಲ್ಲಿನ ಅಡುಗೆಯಲ್ಲಿ ಟೊಮೆಟೊ ತನ್ನದೆಯಾದ ಸ್ಥಾನ ಪಡೆದು, ಮುಖ್ಯ ಸಾಮಗ್ರಿಯಾಗಿದೆ. ದಿಢೀರ್‌ ದರ ಏರಿಕೆಯಿಂದ ಕೆ.ಜಿ. ತೆಗೆದುಕೊಂಡು ಹೋಗುವವರು ಅರ್ಧ ಕೆ.ಜಿ.ಗೆ ಇಳಿಕೆ ಕಂಡಿದ್ದಾರೆ.

ಅಕಾಲಿಕ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಇದರೊಂದಿಗೆ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ಟೊಮೆಟೊ ಪ್ರಮಾಣದಲ್ಲೂ ಇಳಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ನಾಸಿಕ್ ನಿಂದ ಪೂರೈಕೆ ಆಗುತ್ತಿದ್ದ ಟೊಮೆಟೊ ಇಳಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆ ಆಗಿದೆ. ಮೂರು ನಾಲ್ಕು ದಿನಗಳಿಂದ ಸತತವಾಗಿ ಬೆಲೆ ಏರುತ್ತಲೇ ಸಾಗಿದೆ. ಹೀಗೆ ಮುಂದುವರೆದರೆ ಈ ಬಾರಿಯೂ ಟೊಮೆಟೊ ಬೆಳೆಗಾರರು ಹೊಸ ಕಾರು ಕೊಳ್ಳಲಿದ್ದಾರೆ.

Share Information