ಬೆಂಗಳೂರು, ಮಾರ್ಚ್ 12: ಆಟವಾಡುತ್ತಿದ್ದ ವೇಳೆ ನೀರಿನ ಸಂಪ್ಗೆ ಬಿದ್ದು ಎರಡೂವರೆ ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಣ್ಣಯ್ಯ ಹಾಗೂ ಋತು ದಂಪತಿಯ ಪುತ್ರ ಎರಡೂವರೆ ವರ್ಷದ ಚಿರಾಗ್ ಮೃತ ಮಗು ಎಂದು ಗುರುತಿಸಲಾಗಿದೆ.

ಮಾಹಿತಿಯ ಪ್ರಕಾರ, ದಂಪತಿ ಸಂಬಂಧಿಕರ ಮದುವೆಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಅಣ್ಣಯ್ಯ ಕಾರು ತೊಳೆಯಲು ಮನೆಯ ಬಳಿ ಇರುವ ನೀರಿನ ಸಂಪಿನ ಮುಚ್ಚಳವನ್ನು ತೆರೆದಿದ್ದರು. ಬಳಿಕ ಅವರು ಕೆಲ ಹೊತ್ತಿನ ಕಾಲ ಮನೆಯೊಳಗೆ ತೆರಳಿದ್ದಾರೆ. ಈ ನಡುವೆ ಮನೆಯ ಹೊರಭಾಗದಲ್ಲಿ ಆಟವಾಡುತ್ತಿದ್ದ ಚಿರಾಗ್ ಅಜಾಗರೂಕತೆಯಿಂದ ತೆರೆದಿದ್ದ ಸಂಪ್ಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ. ಮಗುವನ್ನು ಕೆಲ ಸಮಯದವರೆಗೆ ಕಾಣದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಹಾಗೂ ಮನೆಯವರು ಸುತ್ತಮುತ್ತ ಹುಡುಕಾಟ ನಡೆಸಿದರು.
ಹುಡುಕಾಟದ ವೇಳೆ ಸಂಪ್ನೊಳಗೆ ಮಗು ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಮಗುವನ್ನು ಹೊರತೆಗೆದರೂ ಆಗಲೇ ಮಗು ಮೃತಪಟ್ಟಿತ್ತು ಎಂದು ತಿಳಿದುಬಂದಿದೆ. ಈ ಘಟನೆ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಿಸಿದ್ದು, ಸ್ಥಳೀಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಮನೆಯ ಆವರಣದಲ್ಲಿ ಇರುವ ನೀರಿನ ಸಂಪ್ ಹಾಗೂ ಟ್ಯಾಂಕ್ಗಳಿಗೆ ಭದ್ರವಾದ ಮುಚ್ಚಳ ಇರಿಸುವುದು, ಚಿಕ್ಕಮಕ್ಕಳ ಮೇಲೆ ನಿರಂತರ ಕಣ್ಗಾವಲು ಇಡುವುದು ಅತ್ಯಂತ ಅಗತ್ಯವೆಂದು ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.