ಚಾಮರಾಜನಗರ, ಮಾರ್ಚ್ 24: ಹುಲಿ ಕಾರ್ಯಾಚರಣೆ ವೇಳೆ ಅರವಳಿಕೆ ಮದ್ದು ನೀಡಿದ್ದರೂ ಹುಲಿ ಏಕಾಏಕಿ ಎದ್ದು ನಿಂತು ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ದಾಳಿ ಮಾಡಿದ ಘಟಮೆ ಗುಂಡ್ಲು ಪೇಟೆಯಲ್ಲಿ ನಡೆದಿದೆ. ಹುಲಿ ಸೆರೆಗೆ ಕೈಗೊಳ್ಳಲಾಗಿದ್ದ ‘ಆಪರೇಷನ್ ಬೀಸ್ಟ್’ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ.

ಹುಲಿಗೆ ಅರವಳಿಕೆ (ಡಾಟ್) ನೀಡಿದ ನಂತರ ಅದು ಸಂಪೂರ್ಣವಾಗಿ ಪ್ರಜ್ಞೆ ತಪ್ಪುವ ಮುನ್ನವೇ ಸೆರೆ ಹಿಡಿಯಲು ಸಿಬ್ಬಂದಿ ಮುಂದಾಗಿದ್ದರು. ನಿಯಮ ಪ್ರಕಾರ, ಹಿರಿಯ ಅಧಿಕಾರಿಗಳು ಮತ್ತು ಪಶುವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮುಂದಿನ ಕ್ರಮ ಕೈಗೊಳ್ಳಬೇಕಾಗಿದ್ದರೂ, ಈ ಸಂದರ್ಭದಲ್ಲಿ ಆತುರದ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನಲಾಗಿದೆ. ಸಿಬ್ಬಂದಿ ಸೆರೆ ಹಿಡಿಯಲು ಬರುತ್ತಿದ್ದಂತೆಯೇ ಗಾಬರಿಗೊಂಡ ಹುಲಿ ರಿವರ್ಸ್ ಅಟ್ಯಾಕ್ ನಡೆಸಿ, ಫಾರೆಸ್ಟ್ ಗಾರ್ಡ್ ಬಸವೇಗೌಡ ಮೇಲೆ ದಾಳಿ ನಡೆಸಿದೆ. ಹುಲಿಯ ಒಂದೇ ಹೊಡೆತಕ್ಕೆ ಅವರ ಕೈಗೆ ಗಂಭೀರ ಗಾಯವಾಗಿದೆ.