ಬೆಂಗಳೂರು, ಏಪ್ರಿಲ್ 03: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದ ನಡುವೆಯೇ, ಜನತೆಗೆ ಹವಾಮಾನ ಇಲಾಖೆಯು ಮಳೆಯ ಸಿಹಿಸುದ್ದಿ ನೀಡಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ವರದಿಯ ಪ್ರಕಾರ, ಏಪ್ರಿಲ್ 03 ರಂದು ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಅಕಾಲಿಕ ಮಳೆಯಾಗುವ ಸಾಧ್ಯತೆಯಿದೆ.

ವಿಶೇಷವಾಗಿ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ರಾಯಚೂರು ಮತ್ತು ಯಾದಗಿರಿಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಭಾಗಗಳಲ್ಲಿ ಮಳೆಯ ಸಮಯದಲ್ಲಿ ಗಂಟೆಗೆ 30 ರಿಂದ 50 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆಯ ವೇಳೆಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಭಾಗದಲ್ಲಿ ತಾಪಮಾನದ ಪ್ರಮಾಣವು ಯಥಾಸ್ಥಿತಿಯಲ್ಲಿ ಮುಂದುವರಿಯಲಿದ್ದರೂ, ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಂಭವವಿದೆ.
ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನವು 34°C ವರೆಗೆ ಏರಿಕೆಯಾಗುವ ಸಾಧ್ಯತೆಯಿದ್ದು, ಉರಿಬಿಸಿಲಿನ ವಾತಾವರಣ ಮುಂದುವರಿಯಲಿದೆ. ಆದರೆ, ಮಧ್ಯಾಹ್ನದ ನಂತರ ನಗರದಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಹಗುರವಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಗುರುವಾರ ಸಂಜೆ ಬಳಿಕ ಉತ್ತಮ ಮಳೆಯಾಗಿದೆ. ಗಬ್ಬಲಡ್ಕ, ಮುಳ್ಳೇ ರಿಯ, ಬೆಳ್ಳಿಪ್ಪಾಡಿ, ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಸುರಿದಿದೆ. ಮಂಗಳೂರಿನಲ್ಲಿ 33.8 ಡಿ. ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.3 ಡಿ. ಸೆ. ಇಳಿಕೆ ಮತ್ತು 24.7 ಡಿ. ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಉಷ್ಣಾಂಶ ಏರಿಕೆ ಕಂಡಿತ್ತು.
ಭಾರತೀಯ ಹವಾಮಾನಿಲಾಖೆ ಮುನ್ಸೂಚನೆಯ ಪ್ರಕಾರ ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ. 30ರಿಂದ 40 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ತಿಳಿಸಿದೆ.