ಕುಂದಾಪುರ, ಜನವರಿ 5: ಸರಕಾರಿ ಬಸ್ ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾಲೇಜು ವಿಧ್ಯಾರ್ಥಿಗಳು ಸಹಿತ ಹಲವರಿಗೆ ಗಂಭೀರ ಗಾಯಗಳಾದ ಘಟನೆ ತಲ್ಲೂರು-ನೇರಳಕಟ್ಟೆ ರಸ್ತೆಯ ಶೆಟ್ರಕಟ್ಟೆ ತಿರುವಿನಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂದಾಪುರದಿಂದ ಅಜ್ರಿ-ಸಿದ್ದಾಪುರ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್, ನೇರಳಕಟ್ಟೆಯಿಂದ ತಲ್ಲೂರು ಕಡೆಗೆ ಹೋಗುತ್ತಿದ್ದ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ನಡುವೆ ಈ ಅಪಘಾತ ಸಂಭವಿಸಿದೆ. ಟಿಪ್ಪರ್ ಬಸ್‌ನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಗೆ ವ್ಯಾಪಕ ಹಾನಿಯಾಗಿದೆ.

ಡಿಕ್ಕಿಯ ಪರಿಣಾಮವಾಗಿ ಬಸ್‌ನ ಚಾಲಕನ ಬದಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಸಂಜೆ ವೇಳೆ ಘಟನೆ ನಡೆದಿದ್ದರಿಂದ, ಬಸ್ ಕಾಲೇಜು ವಿದ್ಯಾರ್ಥಿಗಳಿಂದ ತುಂಬಿತ್ತು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 15 ಮಂದಿ ಪ್ರಯಾಣಿಕರು ಗಾಯಗೊಂಡರು. ಇದರಲ್ಲಿ ಮೂವರ ಸ್ಥಿತಿ ಗಂಭೀರ ವಾಗಿದ್ದು, ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟಿಪ್ಪರ್ ಚಾಲಕ ರಾಘವೇಂದ್ರ ತೀವ್ರ ಗಾಯ ಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.



