ಶಿರ್ವ ಫೆಬ್ರವರಿ 21: ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ವೃದ್ದೆಯೊಬ್ಬರ ಚಿನ್ನದಸರ ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅರೆಸ್ಟ್ ಮಾಡುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಉತ್ತರ ಕನ್ನಡ ಜಿಲ್ಲೆಯ ಆನಂದ್ (49), ಕಿರಣ್ ಧರ್ಮರಾಜ್ ಗೋಡಿಮನಿ (19) ಮತ್ತು ಶಶಿಧರ (19) ಎಂದು ಗುರುತಿಸಲಾಗಿದೆ.
ಕುರ್ಕಾಲು ಗ್ರಾಮದ ಶಂಕರಪುರದ ಹೆಲೆನ್ ಡಿಸೋಜ(69) ಎಂಬವರು ತನ್ನ ಮನೆಯ ಹಿಂಬದಿಯಲ್ಲಿ ಗೀತಾ ಅವರೊಂದಿಗೆ ಮಲ್ಲಿಗೆ ಕಟ್ಟುತ್ತಿದ್ದ ವೇಳೆ, ಈ ಹಿಂದೆ ಬಾಡಿಗೆಗೆ ಇದ್ದ ಆನಂದ ಹಾಗೂ ಇನ್ನಿಬ್ಬರು ಬಾಡಿಗೆ ರೂಮ್ ವಿಚಾರಿಸಲು ಬಂದಿದ್ದರು. ಅವರೊಂದಿಗೆ ಮಾತನಾಡಿ ಚಹಾ ಕುಡಿದ ನಂತರ, ಯಾವುದೇ ಕೊಠಡಿಗಳು ಲಭ್ಯವಿಲ್ಲ ಎಂದು ಮೂವರಿಗೆ ತಿಳಿಸಿದ್ದರು. ಬೆಳಿಗ್ಗೆ 9:45 ರ ಸುಮಾರಿಗೆ, ಆರೋಪಿಗಳಲ್ಲಿ ಒಬ್ಬ ಮತ್ತೆ ಹೆಲೆನ್ ಅವರ ಬಳಿಗೆ ಬಂದು ಮೊಬೈಲ್ ನಂಬರ್ ಕೆಳಿದ್ದಾನೆ.

ಹೆಲೆನ್ ಡಿಸೋಜ ಮೊಬೈಲ್ ನಂಬರ್ ಹೇಳುತ್ತಿರುವಾಗ ಆತ ಹೆಲೆನ್ ಅವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 3,50,000ರೂ. ಮೌಲ್ಯದ 28 ಗ್ರಾಂ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಹೋದನು. ಆಗ ಆತನನ್ನು ತಡೆಯಲು ಬಂದ ಹೆಲೆನ್ ಅವರ ಅಕ್ಕ ಥೆರಸಾ ಎಂಬವರನ್ನು ದೂಡಿ ಹಾಕಿ ಮೂವರು ಬೈಕ್ನಲ್ಲಿ ಪರಾರಿಯಾದರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿದ ಶಿರ್ವಾ ಪೊಲೀಸರು ಸ್ಥಳೀಯ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮೂವರು ವ್ಯಕ್ತಿಗಳು ಪಲ್ಸರ್ ಮೋಟಾರ್ಸೈಕಲ್ನಲ್ಲಿ ಬಂದು ಪರಾರಿಯಾಗಿರುವುದು ಕಂಡುಬಂದಿದೆ. ಕೂಡಲೇ ಈ ದೃಶ್ಯಾವಳಿಗಳನ್ನು ಜಿಲ್ಲೆಯಾದ್ಯಂತ ಎಲ್ಲಾ ಚೆಕ್ಪೋಸ್ಟ್ಗಳೊಂದಿಗೆ ಜಿಲ್ಲಾ ನಿಯಂತ್ರಣ ಕೊಠಡಿಗೆ ಕಳುಹಿಸಿ ನಾಕಾಬಂಧಿ ಮಾಡಲು ಕ್ರಮಕೈಗೊಳ್ಳಲಾಗಿತ್ತು.
ಅದರಂತೆ ಎಲ್ಲಾ ಕಡೆ ಸರಿಯಾದ ರೀತಿಯಲ್ಲಿ ನಾಕಾಬಂದಿ ನಡೆಸಿ ಆರೋಪಿಗಳನ್ನು ಕೃತ್ಯ ನಡೆದ ಕೇವಲ ಮೂರರಿಂದ ನಾಲ್ಕು ಗಂಟೆಯ ಒಳಗಾಗಿ ಶಿರೂರ ಚೆಕ್ ಪೋಸ್ಟ್ನಲ್ಲಿ ಬೈಂದೂರು ಪೊಲೀಸರು ಆರೋಪಿಗಳನ್ನು ತಡೆದು ನಿಲ್ಲಿಸಿ, ಶಿರ್ವ ಪೊಲೀಸರ ವಶಕ್ಕೆ ನೀಡಿದರು. ಶಿರ್ವ ಪೊಲೀಸರು ಆರೋಪಿಗಳಿಂದ ಒಂದು ಬಂಗಾರದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರ್ಯಾಚರಣೆಯನ್ನು ಕಾಪು ವೃತ್ತ ನಿರೀಕ್ಷಿಕ ಕಾಪು ಅಜ್ಮತ್ ಅಲಿ ನೇತೃತ್ವದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ ಮರಬದ, ಬೈಂದೂರು ಎಸ್ಸೈ ಸುನಿಲ್ ಕುಮಾರ್, ಶಿರ್ವ ಠಾಣೆಯ ದಯಾನಂದ ಪ್ರಭು, ಅನ್ವರ ಅಲಿ, ಹರೀಶ, ಯಲಾಲ್ಲಿಂಗ ಸುರೇಶ ಹಾಗೂ ಬೈಂದೂರು ಠಾಣೆಯ ಸಿಬ್ಬಂದಿಗಳು ನಡೆಸಿದ್ದಾರೆ.