LATEST NEWS
ಸಹಪಾಠಿಯನ್ನು ನಂಬಿ ಹೋದ ವಿದ್ಯಾರ್ಥಿನಿಯ ದುರಂತ ಅಂತ್ಯ..!
ವಿಜಯವಾಡ, ಫೆಬ್ರವರಿ 26: ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ಪೇಟೆಯಲ್ಲಿ ಪ್ರೀತಿ ನಿರಾಕರಿಸಿದ ಕೋಪಕ್ಕೆ ಪ್ರಿಯಕರನೊಬ್ಬ ಪ್ರೇಯಸಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.ಅನುಷಾ (19) ಕೊಲೆಯಾದ ಯುವತಿ. ಈಕೆ ಮುಪ್ಪಳ ಮಂಡಲದ ಗೊಲ್ಲಪಡು ಗ್ರಾಮದ ನಿವಾಸಿ. ನರಸರಾವ್ಪೇಟೆಯ ಕೃಷ್ಣವೇಣಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದಳು. ಬುಧವಾರ ಬೆಳಗ್ಗೆ ಕೊಲೆ ನಡೆದಿದೆ.
ಆರೋಪಿ ವಿಷ್ಣುವರ್ಧನ್ ರೆಡ್ಡಿ ಅನುಷಾಳ ಸಹಪಾಠಿ. ಈತ ವಿನುಕೊಂಡ ಮಂಡಲದ ಬೊಲ್ಲಪಲ್ಲಿ ಗ್ರಾಮದವನು. ಮಾತನಾಡಬೇಕೆಂದು ಬುಧವಾರ ಅನುಷಾಳನ್ನು ಕಾಲೇಜಿನಿಂದ ಪಿಕ್ಅಪ್ ಮಾಡಿಕೊಂಡು ಪಲಪಡು ರಸ್ತೆಯಲ್ಲಿರುವ ನಿರ್ಜನ ಪ್ರದೇಶವೊಂದಕ್ಕೆ ಕರೆದೊಯ್ದು, ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ.
ಪರಸ್ಪರ ಪ್ರೀತಿಯಲ್ಲಿದ್ದ ಇಬ್ಬರು ಇತ್ತೀಚೆಗೆ ಕಿತ್ತಾಡಿಕೊಂಡಿದ್ದರು. ಅನುಷಾಳಿಗೆ ಬೇರೊಬ್ಬನ ಜತೆ ಸಂಬಂಧವಿದೆ ಎಂದು ವಿಷ್ಣುವರ್ಧನ್ಗೆ ಅನುಮಾನ ಬಂದಿತ್ತು. ತನಗೆ ಮೋಸ ಮಾಡುತ್ತಿದ್ದಾಳೆ ಎಂಬ ಕೋಪದಿಂದ ಆಕೆಯೊಂದಿಗೆ ವಾಗ್ವಾದಕ್ಕೆ ಇಳಿದ ಆರೋಪಿ ತನ್ನ ಕೋಪದ ನಿಯಂತ್ರಣ ಕಳೆದುಕೊಂಡು ಕೊಂದೇ ಬಿಟ್ಟಿದ್ದಾನೆ. ಇದಾದ ಬಳಿಕ ಅನುಷಾಳ ಮೃತದೇಹವನ್ನು ಪಕ್ಕದಲ್ಲೇ ಇದ್ದ ಕಾಲುವೆಗೆ ಎಸೆದುಬಂದಿದ್ದ.
ಆಕೆ ನೀಡುವ ಸಮಜಾಯಿಸಿ ತನ್ನ ಮನಸ್ಸಿಗೆ ಸರಿ ಅನಿಸದಿದ್ದರೆ ಕೊಲೆ ಮಾಡಲು ಮೊದಲೇ ಆರೋಪಿ ಪ್ಲಾನ್ ಮಾಡಿದ್ದ. ತನ್ನ ಯೋಜನೆಯಂತೆಯೇ ಆಕೆಯನ್ನು ಕೊಂದು ಕಾಲುವೆಗೆ ಎಸೆದು ನೇರ ನರಸರಾವ್ಪೇಟ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಇದಾದ ಬಳಿಕ ಪೊಲೀಸರು ಅನುಷಾಳ ಮೃತದೇಹವನ್ನು ಕಾಲುವೆಯಿಂದ ಹೊರತೆಗೆದು ನರಸರಾವ್ಪೇಟೆಯ ಶವಗಾರಕ್ಕೆ ಸ್ಥಳಾಂತರಿಸಿದರು. ಇತ್ತ ಅನುಷಾಳ ಮಾಹಿತಿ ತಿಳಿದಿ ಪಾಲಕರು ಮತ್ತು ಸಂಬಂಧಿಕರು ಆಕೆಯ ಶವದ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿ, ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಅಲ್ಲದೆ, ಬಹುಸಂಖ್ಯೆಯಲ್ಲಿ ಆಗಮಿಸಿದ ಕಾಲೇಜು ವಿದ್ಯಾರ್ಥಿಗಳು ಸಹ ಅನುಷಾ ಕುಟುಂಬದ ಜತೆ ಕೈಜೋಡಿಸಿ ಆರೋಪಿಯನ್ನು ತಮಗೆ ಒಪ್ಪಿಸುವಂತೆ ಪೊಲೀಸರನ್ನು ಒತ್ತಾಯಿಸಿದರು.
ಆದರೆ, ಪೊಲೀಸರು ಹೇಗೋ ಪರಿಸ್ಥಿತಿಯನ್ನು ತಿಳಿಗೊಳಿಸಿ, ಆರೋಪಿಯನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡರು. ಇದೀಗ ಆರೋಪಿ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ) 302 (ಕೊಲೆ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.