Connect with us

DAKSHINA KANNADA

ತಾಂಬೂಲ ಪ್ರಶ್ನೆ ಜ್ಯೋತಿಷ್ಯಕ್ಕೆ ಸವಾಲ್​: ಪ್ರಶ್ನೆಗೆ ಉತ್ತರಿಸಿದರೆ ಲಕ್ಷ ರೂ ಬಹುಮಾನ ಘೋಷಿಸಿದ ನರೇಂದ್ರ ನಾಯಕ್

ಮಂಗಳೂರು, ಮೇ 28: ಮಳಲಿಯಲ್ಲಿ ಮಸೀದಿಯ ನವೀಕರಣ ಕಾಮಗಾರಿ ವೇಳೆ ಪತ್ತೆಯಾದ ದೇಗುಲದ ಬಗ್ಗೆ ತಾಂಬೂಲ ಪ್ರಶ್ನೆ ಹಿನ್ನೆಲೆಯಲ್ಲಿ ಮಂಗಳೂರಿನ ಖ್ಯಾತ ವಿಚಾರವಾದಿ ಲಕ್ಷ ರೂ ಬಹುಮಾನ ನೀಡುವ ಮೂಲಕ ತಾಂಬೂಲ ಪ್ರಶ್ನೆ ಜ್ಯೋತಿಷ್ಯಕ್ಕೆ ಸವಾಲು ಹಾಕಿದ್ದಾರೆ.

ಅಖಿಲ‌ ಭಾರತ ವಿಚಾರವಾದಿಗಳ ಸಂಘದ ಅಧ್ಯಕ್ಷರಾಗಿರುವ ನರೇಂದ್ರ ನಾಯಕ್ ಜ್ಯೋತಿಷ್ಯ ನುಡಿಯುವವರಿಗೆ ಸವಾಲು ಹಾಕಿದ್ದಾರೆ. ಮಳಲಿಯಲ್ಲಿ ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನ ಇತ್ತು ಎಂದು ತಾಂಬೂಲ ಪ್ರಶ್ನೆಯಲ್ಲಿ ವೀಳ್ಯದೆಲೆ ನೋಡಿ ಹಿಂದಿನ ವಿಚಾರಗಳನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಹಿಂದಿನ ವಿಚಾರಗಳನ್ನು ತಿಳಿಸುವವರಿಗೆ ಪ್ರಸಕ್ತವಾಗಿರುವ ವಿಚಾರವನ್ನು ತಿಳಿಸುವಂತೆ ಸವಾಲೊಡ್ಡಿರುವುದಾಗಿ ತಿಳಿಸಿದ್ದಾರೆ.

ನಾನು ಸೀಲ್ ಮಾಡಲಾದ 7 ಕವರ್​ಗಳಲ್ಲಿ ಏನನ್ನು ಹಾಕಿದ್ದೇನೆ ಎಂದು ನಿಖರವಾಗಿ ಹೇಳಬೇಕು. 7 ಕವರ್​ನಲ್ಲಿ ಯಾವುದಾದರೂ ಆರನ್ನು ಆಯ್ಕೆ ಮಾಡಿ ಉತ್ತರಿಸಬೇಕು. ಇದರಲ್ಲಿ 5 ಸರಿ ಉತ್ತರ ಇದ್ದರೆ ಅವರಿಗೆ ತೆರಿಗೆ ಮೊತ್ತ ಕಳೆದು ಒಂದು ಲಕ್ಷ ರೂ ಬಹುಮಾನ ನೀಡಲಾಗುವುದು. ಈ ರೀತಿ 50 ಮಂದಿಗೆ ಬಹುಮಾನ ನೀಡಲಾಗುವುದು. ಅದಕ್ಕೂ ಜಾಸ್ತಿ ಸರಿ ಉತ್ತರ ಬಂದರೆ ತನ್ನಲ್ಲಿ ಶಕ್ತಿ ಇಲ್ಲದೇ ಇರುವುದರಿಂದ ದಿವಾಳಿ ಎಂದು ಘೋಷಿಸುತ್ತೇನೆ ಎಂದು ತಿಳಿಸಿದ್ದಾರೆ.

ಕವರ್ ಒಳಗಡೆ ಏನಿದೆ ಎಂದು ಉತ್ತರಿಸುವವರು ಏನಿದೆ ಎಂಬುದನ್ನು ನಿಖರವಾಗಿ ಹೇಳಬೇಕು. ಉದಾಹರಣೆಗೆ ಕರೆನ್ಸಿ ಆಗಿದ್ದರೆ, ಯಾವ ದೇಶದ್ದು, ಎಷ್ಟು ಮೌಲ್ಯದ್ದು, ಸೀರಿಯಲ್ ನಂಬರ್ ಏನು ಎಂಬುದನ್ನು, ಕಾಗದವಿದ್ದರೆ ಅದರಲ್ಲಿ ಏನನ್ನು ಬರೆಯಲಾಗಿದೆ ಎಂಬುದನ್ನು ತಿಳಿಸಬೇಕು ಎಂದಿದ್ದಾರೆ.

ಕವರನ್ನು ಮೇ 26 ಬೆಳಗ್ಗೆ 11.33 ಕ್ಕೆ ಸೀಲ್ ಮಾಡಲಾಗಿದೆ. ಜೂನ್ 1 ರಂದು ಪ್ರೆಸ್ ಕ್ಲಬ್ ನಲ್ಲಿ ಬೆಳಗ್ಗೆ 10.30 ಕ್ಕೆ ತೆರೆದು ಬಹುಮಾನವನ್ನು ಅಲ್ಲಿಯೆ ಘೋಷಿಸಲಾಗುವುದು. 7 ಕವರ್​ನೊಳಗೆ ಏನಿದೆ ಎಂಬ ಉತ್ತರವನ್ನು 9448216343 ನಂಬರ್ ಗೆ ವಾಟ್ಸ್​ಆ್ಯಪ್​ ಅಥವಾ [email protected] ಇಮೇಲ್​ಗೆ ಮೇ 31 ರಾತ್ರಿ 12 ಗಂಟೆಯೊಳಗೆ ಕಳುಹಿಸಬೇಕು ಎಂದು ತಿಳಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply