DAKSHINA KANNADA
ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿದ್ದ ‘ಸೌಜನ್ಯ’ ಪರ ಟ್ಯಾಬ್ಲೋ ವಶಪಡಿಸಿದ ಪೊಲೀಸರು, ಸಾರ್ವಜನಿಕರಿಂದ ಆಕ್ರೋಶ..!

ಮಂಗಳೂರು : ಮಂಗಳೂರು ದಸರಾದ ಶೋಭಾಯಾತ್ರೆಯಲ್ಲಿ ಧರ್ಮಸ್ಥಳದಲ್ಲಿ ಕೊಲೆಯಾದ ಸೌಜನ್ಯಳ ಭಾವ ಚಿತ್ರ ವಿರುವ ಟ್ಯಾಬ್ಲೋ ಗೆ ಅನುಮತಿ ನಿರಾಕರಿಸಿ ವಶಕ್ಕೆ ಪಡೆದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ದಸರಾ ಸಮಿತಿಯಿಂದ ಟ್ಯಾಬ್ಲೋ ಬಗ್ಗೆ ಆಕ್ಷೇಪ ಬಂದ ಕಾರಣ ಟ್ಯಾಬ್ಲೋವನ್ನು ಉರ್ವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಕಂಡು ಬಂತು. ಮಾಹಿತಿ ಪಡೆದ ಸೌಜನ್ಯ ಪರ ಹೋರಾಟ ಸಮಿತಿಯ ಪದಾಧಿಕಾರಿಗಳು ಪೊಲೀಸ್ ಠಾಣೆಗೆ ಧಾವಿಸಿ ಬಂದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ನಡೆಸಿದರೂ ಇದಕ್ಕೆ ಒಪ್ಪದ ಪೊಲೀಸ್ ಅಧಿಕಾರಿಗಳು ಟ್ಯಾಬ್ಲೋ ಗೆ ಹೋಗಲು ಅನುಮತಿ ನಿರಾಕರಿಸಿದರು.

ಪೋಲಿಸರ ಈ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೌಜನ್ಯ ಪರ ಹೋರಾಟಗಾರರು ಟ್ಯಾಬ್ಲೋದಲ್ಲಿ ಸೌಜನ್ಯಳ ಭಾವಚಿತ್ರ ಹೊರತು ಪಡಿಸಿ ಆಕ್ಷೇಪಾರ್ಹ ಯಾವುದೇ ಬರಹಗಳು, ಅಥವಾ ಇತರ ವಿಷಯ ಇರಲಿಲ್ಲ, ಈ ಟ್ಯಾಬ್ಲೋ ದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ವಿರುದ್ದ ಯಾವುದೇ ಮಾನಹಾನಕಾರಕ ವಿಷಯಗಳನ್ನು ಹಾಕಿರಲಿಲ್ಲ. ರಕ್ತ ಬಿಜಾಸುರ ಕಥೆಯ ಪರಿಕಲ್ಪಣೆಯಲ್ಲಿ ಈ ಸ್ಥಬ್ದಚಿತ್ರ ನಿರ್ಮಾಣವಾಗಿತ್ತು. ಆದ್ರೆ ಪೊಲೀಸರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ ..ನವರಾತ್ರಿ ಸಂದರ್ಭದಲ್ಲಿ ಇವರು ಸೌಜನ್ಯಾಗೆ ದ್ರೋಹ ಮಾಡಿದ್ದಾರೆ. ಅತ್ಯಾಚಾರಿಗಳ ಪರ ನಿಂತಿದ್ದಾರೆ. ಇವರಿಗೆ ಆ ಶಿವನೇ ಮುನಿಯುತ್ತಾನೆ. ಜನಾರ್ದನ ಪೂಜಾರಿ ಹಿಂದಿನಂತೆ ಇರುತ್ತಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು