ಪುತ್ತೂರು ಸೆಪ್ಟೆಂಬರ್ 05: ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನವನ್ನು ಕದ್ದು ಅಲ್ಲೆ ಕಡಿದು ಮಾಂಸ ಸಾಗಾಟ ಮಾಡಿದ್ದು, ಅತ್ಯಂತ ಕೌರ್ಯದ ಕೃತ್ಯವಾಗಿದೆ, ಗೋ ಹತ್ಯೆಯನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ನಿನ್ನೆ ಹಟ್ಟಿಯಿಂದ ಗೋವನ್ನು ಕದ್ದು,ಕಡಿದು ಮಾಂಸ ಸಾಗಾಟ ಮಾಡಿದ್ದಾರೆ. ಇದೊಂದು ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ. ಈ ಕೃತ್ಯವನ್ನು ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸುತ್ತದೆ. ಮುಸಲ್ಮಾನರ ಹಬ್ಬದ ಹಿಂದಿನ ದಿನವೇ ಈ ಕೃತ್ಯ ಎಸಗಲಾಗಿದೆ. ಯಾರ್ಯಾರ ಮನೆಯ ಗೋವುಗಳ ಕದ್ದು ಇವರಿಗೆ ಹಬ್ಬ ಮಾಡುವ ಯೋಗ್ಯತೆ ಇದೆಯಾ ?, ಈ ಕೃತ್ಯವನ್ನು ಯಾಕೆ ಯಾವೊಬ್ಬ ಮೌಲ್ವಿಯೂ, ಧರ್ಮಗುರುವೂ ಪ್ರಶ್ನಿಸೋದಿಲ್ಲ ಎಂದರು.

ಮಾತೆತ್ತಿದರೆ ಕೋಮು ಸಾಮರಸ್ಯದ ಬಗ್ಗೆ ಮಾತನಾಡುವ ಇವರು ಹಿಂದೂಗಳ ಭಾವನೆಗೆ ನೋವಾದಾಗ ಯಾವ ಮಾತನಾಡುವುದಿಲ್ಲ, ಹಿಂದೂಗಳ ಶ್ರದ್ಧಾಬಿಂದು ಗೋವುಗಳ ಹತ್ಯೆ ಮಾಡಲಾಗುತ್ತಿದ್ದರು ಪೋಲೀಸರು ಇದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸುಪ್ರೀಕೋರ್ಟ್ ಆದೇಶ ಎಂದು ಪೋಲೀಸರು ತಡೆಯೊಡ್ಡುತ್ತಿದ್ದಾರೆ. ಅದೇ ರೀತಿ ಸುಪ್ರೀಂಕೋರ್ಟ್ ಗೋಹತ್ಯೆಯನ್ನು ನಿಶೇಧಿಸಿದೆ, ರಾಜ್ಯದಲ್ಲಿ ಗೋಹತ್ಯೆ ವಿರೋಧಿ ಕಾನೂನು ಇದೆ, ಪೋಲೀಸರು ಯಾಕೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಹಿಂದೂ ಕಾರ್ಯಕರ್ತರ ಮನೆ ಮನೆಗೆ ತೆರಳಿ ಫೋಟೋ, ಜಿಪಿಆರ್ ಮಾಡಲಾಗಿದೆ. ಅದೇ ರೀತಿ ಎಷ್ಟು ಗೋಕಳ್ಳರ, ಡ್ರಗ್ಸ್ ದಂಧೆಕೋರರ ಮನೆಗೆ ಪೋಲೀಸರು ನುಗ್ಗಿದ್ದಾರೆ. ಹಟ್ಟಿಯಿಂದ ದನ ಕದ್ದು ಕೊಂದ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಒಂದು ದಿನದ ಗಡುವನ್ನು ಪೋಲೀಸರಿಗೆ ನೀಡಿದ್ದೇವೆ, ಪೋಲೀಸರು ಕಾರ್ಯೊಪ್ರವೃತ್ತರಾಗದಿದ್ದಲ್ಲಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಲಿದೆ ಎಂದು ನರಸಿಂಹ ಮಾಣಿ ಎಚ್ಚರಿಸಿದ್ದಾರೆ.



