Connect with us

    DAKSHINA KANNADA

    ಅರಣ್ಯ ಭಾಗದಲ್ಲಿ ಹೆಚ್ಚುತ್ತಿರುವ ಕಾಳ್ಗಿಚ್ಚು, ನಿಯಂತ್ರಣಕ್ಕಿಲ್ಲ ಆಗ್ನಿಶಾಮಕ ದಳ

    ಪುತ್ತೂರು, ಮಾರ್ಚ್ 11: ಬಿಸಿಲಿನ ಧಗೆ ವಾರದಿಂದ ತೀವ್ರವಾಗಿದ್ದು, ಅರಣ್ಯ – ಗುಡ್ಡ ಪ್ರದೇಶ, ಕೃಷಿ ಭೂಮಿ ಸೇರಿ ಒಣ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಬೆಂಕಿ ಅವಘಗಡಗಳು ಈ ವರ್ಷ ಗಣನೀಯವಾಗಿ ಏರಿಕೆಯಾಗಿದ್ದು, ಅಗ್ನಿಶಾಮಕ ದಳಕ್ಕೆ ಬೆಂಕಿ ನಂದಿಸುವ ಕಾರ್ಯ ಸವಾಲಾಗಿ ಪರಿಣಮಿಸಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಅಗ್ನಿಶಾಮಕ ದಳಕ್ಕೆ ಆಧುನಿಕ ತಂತ್ರಜ್ಞಾನಗಳ ಸೇರ್ಪಡೆಯಾಗದೆ ಅರಣ್ಯ ಪ್ರದೇಶಗಳ ನಾಶವಾಗುತ್ತಿದೆ.

    ಗಾಳಿಯ ತೀವ್ರತೆ ಹಾಗೂ ಬಿಸಿಲಿನ ತಾಪಕ್ಕೆ ಗುಡ್ಡ ಪ್ರದೇಶಗಳಲ್ಲಿ ಎಲೆಗಳು ಒಣಗಿ ಬೆಂಕಿ ಹರಡಲು ಸಹಕಾರಿಯಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಅರಣ್ಯ ಹಾಗೂ ಗುಡ್ಡಕ್ಕೆ ಬೀಳುವ ಬೆಂಕಿ ಪ್ರಕರಣ ೫ರಿಂದ ೧೦ ಇದ್ದರೆ, ಈ ವರ್ಷ ಗಣನೀಯವಾಗಿ ಏರಿಕೆಯಾಗಿ ೩೦ರಿಂದ ೫೦ ರಷ್ಟು ತಲುಪಿದೆ. ಅಗ್ನಿಶಾಮಕ ವಾಹನಗಳು ಹೋಗದ ಪ್ರದೇಶದಲ್ಲಿ ಬೆಂಕಿ ಹರಡುತ್ತಿರುವುದು ಸವಾಲಾಗಿ ಪರಿಣಮಿಸಿದೆ. ಇದರಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಲವು ರಾತ್ರಿ ಎನ್ನದೆ ನಿರಂತರ ಕೆಲಸ ಮಾಡುವ ಅನಿವಾರ್ಯತೆ ತಲೆದೋರಿದೆ.

    ಪುತ್ತೂರು ಅಗ್ನಿಶಾಮಕದಲ್ಲಿ ೨ ವಾಹನ, ಬಂಟ್ವಾಳದಲ್ಲಿ ೧ವಾಹನ, ಸುಳ್ಯದಲ್ಲಿ ೧ ವಾಹನ, ಬೆಳ್ತಂಗಡಿಯಲ್ಲಿ 2 ವಾಹನಗಳಿದೆ. ಮಂಗಳೂರಿನಲ್ಲಿ ನಗರ ಭಾಗದ ಎರಡು ಕೇಂದ್ರಗಳಲ್ಲಿ ತಲಾ 2 ವಾಹನಗಳಿದೆ. ಇದರಲ್ಲಿ ಹೆಚ್ಚಿನವು 2005ಕ್ಕೂ ಹಿಂದಿನವಾಗಿದ್ದು, ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಪುವುದು ಕಷ್ಟಕರವಾಗಿದೆ. ಕಟ್ಟಡಗಳಲ್ಲಿ ಉಂಟಾಗುವ ಬೆಂಕಿಗಳ ಶಮನಕ್ಕೆ ಈ ವ್ಯವಸ್ಥೆ ಸಾಗುತ್ತದೆಯಾದರೂ, ಅರಣ್ಯ ಹಾಗೂ ಗುಡ್ಡ ಬೆಂಕಿಯ ಸಂದರ್ಭಕ್ಕೆ ಈ ವಾಹನಗಳು ಸಾಕಾಗುತ್ತಿಲ್ಲ. ಚುನಾವಣೆಯ ಸಮಯವಾಗಿರುವ ಕಾರಣ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ವಾಹನ ತರಿಸಿಕೊಳ್ಳಲಾಗದ ಪರಿಸ್ಥಿತಿ ಇಲಾಖೆಗೆ ಇದೆ.

    ವಿದೇಶಗಳಲ್ಲಿ ಕಟ್ಟದ ಬೆಂಕಿಯನ್ನು ನಂದಿಸಲು ಆಧುನಿಕ ತಂತ್ರಜ್ಞಾನವಾದ ಬೆಂಕಿ ಚೆಂಡು (ಪೈಯರ್ ಬಾಲ್) ಗಳನ್ನು ಬಳಸಲಾಗುತ್ತಿದೆ. ಅರಣ್ಯ ಹಾಗೂ ಗುಡ್ಡ ಪ್ರದೇಶದ ಬೆಂಕಿ ಶಮನಕ್ಕೆ ರಾಸಾಯನಿಕ ಮಿಶ್ರಿತ ಹುಡಿಗಳನ್ನು ಬಳಸಲಾಗುತ್ತದೆ. ಆದರೆ ರಾಜ್ಯದಲ್ಲಿ ಸರ್ಕಾರ ಇಂತ ಆಧುನಿಕ ತಂತ್ರಜ್ಞಾನದ ಕಡೆಗೆ ಇದುವರೆಗೆ ಗಮನವೇ ಹರಿಸಿಲ್ಲ. ಕಳೆದ ಕೆಲವು ವರ್ಷಗಳಿಂದ ಪಶ್ಚಿಮ ಘಟ್ಟ ಪ್ರದೇಶ ಬೆಂಕಿಗೆ ಆಹುತಿಯಾಗುತ್ತಿದ್ದರೂ, ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಳ್ಳದೆ ದಿವ್ಯನಿರ್ಲಕ್ಷತೆಯನ್ನು ವಹಿಸಿದೆ.

    ಗುಂಡ್ಯ ಕೆಂಜಾಳ ಭಾಗಕ್ಕೆ ಪುತ್ತೂರಿನಿಂದ 60 ಕಿಮೀ ದೂರವಿದ್ದು, ಇಲ್ಲಿ ಬೆಂಕಿ ಅನಾಹುತಗಳಾದರೆ ಪುತ್ತೂರಿನಿಂದ ಅಗ್ನಿಶಾಮಕ ದಳ ಹೋಗಬೇಕಾದ ಅನಿವಾರ್ಯತೆ ಇದೆ. ವಿಟ್ಲ ಭಾಗದ ಮಾಣಿಲ, ಕರೋಪಾಡಿ ಭಾಗಕ್ಕೂ ಬಂಟ್ವಾಳ ಅಥವಾ ಪುತ್ತೂರಿನ ಅಗ್ನಿಶಾಮಕ ವಾಹನ ಬರಬೇಕಾದ ಪರಿಸ್ಥಿತಿ ಇದೆ. ವಿಟ್ಲದಲ್ಲಿ ಅಗ್ನಿಶಾಮಕ ದಳದ ಸ್ಥಾಪನೆಯಾಗಬೇಕೆಂಬ ಬೇಡಿಕೆ ಕಳೆದ ಆರು ಏಳು ವರ್ಷಗಳಿಂದ ಜನರು ಕೇಳಿಕೊಂಡು ಬರುತ್ತಿದ್ದಾರೆ. ರಕ್ಷಿತಾರಣ್ಯದ ಆಸುಪಾಸಿನಲ್ಲಿ ಅಗ್ನಿಶಾಮಕ ದಳಗಳು ಸ್ಥಾಪನೆಯಾದರೆ ಬೆಂಕಿ ಹರಡುವ ಮೊದಲೇ ಶಮನ ಮಾಡಲು ಸಾಧ್ಯ ಎಂಬ ಮಾತುಗಳೂ ಕೇಳಿ ಬರುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply