ನವದೆಹಲಿ ಮೇ 03: ದೆಹಲಿಯ ವಿವೇಕ್ ವಿಹಾರ್ನಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭಾರಿ ಬೆಂಕಿಯ ದುರಂತದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ಕಟ್ಟಡದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಮೂರು ಮತ್ತು ನಾಲ್ಕನೇ ಮಹಡಿಗೆ ಹರಡಿತು. ಸ್ಥಳಕ್ಕೆ ಧಾವಿಸಿದ 14 ಅಗ್ನಿಶಾಮಕ ವಾಹನಗಳು ಸುಮಾರು ಎರಡು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದವು. ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಡಜನ್ಗೂ ಹೆಚ್ಚು ಜನರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಎಸಿ (AC) ಸ್ಫೋಟಗೊಂಡಿದ್ದರಿಂದ ಈ ಅವಘಡ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೀಡಿಯೊಗಳು ಸುಟ್ಟ ದೇಹಗಳು ಮತ್ತು ಕುಸಿದ ರಚನೆಗಳ ಭೀಕರತೆಯನ್ನು ತೋರಿಸುತ್ತಿವೆ. ದೆಹಲಿ ಪೊಲೀಸ್ ಅಪರಾಧ ತಂಡವು ಶವಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದೆ. ಸ್ಥಳೀಯ ಶಾಸಕ ಸಂಜಯ್ ಗೋಯಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.