DAKSHINA KANNADA
ಕರಾವಳಿಯಲ್ಲಿ ಗಣೇಶ ಚತುರ್ಥಿ ಸಡಗರದ ಮಧ್ಯೆ ಸಂಭ್ರಮದ ಕನ್ಯಾ ಮೇರಿಯ ಜನ್ಮದಿನಾಚರಣೆ..!
ಮಂಗಳೂರು: ಕರಾವಳಿಯಲ್ಲಿ ಗಣೇಶ ಚತುರ್ಥಿ ಹಬ್ಬದ ಸಡಗರದ ಮಧ್ಯೆ ಕ್ರೈಸ್ತರು ಮಾತೆ ಮೇರಿಯ ಜನ್ಮ ದಿನ ಆಚರಣೆಯನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.
ಕರಾವಳಿಯ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗಳಲ್ಲಿ ಸಂಭ್ರಮ ಕಳೆಗಟ್ಟಿತ್ತು. ಅಲಲ್ಲಿ ಮಾತೆ ಮೇರಿಯ ಮೂರ್ತಿಯೊಂದಿಗೆ ಭವ್ಯ ಮೆರವಣಿಗೆಗಳನ್ನು ಆಯೋಜಿಸಲಾಗಿತ್ತು. ಬುಟ್ಟಿ ತುಂಬಾ ಹೂವು ಹೊತ್ತ ಪುಟಾಣಿಗಳು ಹೊ ಬಟ್ಟೆ ತೊಟ್ಟು ಗುರು ಹಿರಿಯರೊಂದಿಗೆ ಇಗರ್ಜಿಗಳ ಆವರಣದಲ್ಲಿ ಹೂವು ಚೆಲ್ಲಿ ಮಾತೆ ಮೇರಿಯನ್ನು ಅಭಿನಂದಿಸಿದರು. ಇದೇ ಸಂದರ್ಭ ಹೊಸ ಬೆಳೆಯ ಹಸಿರು ತೆನೆಯನ್ನು ಧರ್ಮಗುರುಗಳು ಸ್ವಾಗತಿಸಿದರು. ಕ್ರೈಸ್ತರ ತೆನೆ ಹಬ್ಬದ ಪ್ರಯುಕ್ತ ವಿವಿಧ ಇಗರ್ಜಿಯಲ್ಲಿ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದು ಬಳಿಕ ತೆನೆ ಹಾಗೂ ಕಬ್ಬನ್ನು ಕ್ರೈಸ್ತ ಕುಟುಂಬದ ಪ್ರತಿ ಮನೆಗಳಿಗೂ ಹಂಚಲಾಯಿತು.
ಮಂಗಳೂರಿನ ಅನೇಕ ಚರ್ಚುಗಳಲ್ಲೂ ಮೊಂತಿ ಫೆಸ್ತ್ ಸಂಭ್ರಮ ಮನೆ ಮಾಡಿತ್ತು. ನಗರದ ಕುಲಶೇಖರ ಪವಿತ್ರ ಶಿಲುಬೆಯ ಚರ್ಚಿನಲ್ಲೂ ಸಂಭ್ರಮ ಮನೆ ಮಾಡಿತ್ತು. ಮಾತೆ ಮೇರಿ ವಿಗ್ರಹದೊಂದಿಗೆ , ಭತ್ತದ ತೆನೆಯೊಂದಿಗೆ ತೆರೆದ ವಾಹನದಲ್ಲಿ ಮೈದಾನದಲ್ಲಿ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು.
ಚರ್ಚ್ನ ಹಿರಿಯ ಧರ್ಮಗುರುಗಳಾದ ವಂ. ಕ್ಲಿಫರ್ಡ್ ಫೆರ್ನಾಂಡಿಸ್ ಅವರೊಂದಿಗೆ ಸಹಾಯಕ ಗುರುಗಳಾದ ವಂ. ವಿಜಯ್ ಮೊಂತೆರೊ ಮತ್ತು ವಂ. ಪಾಲ್ ಸೆಬಾಸ್ಟಿಯನ್ ಡಿ’ಸೋಜಾ ಅವರು ಉತ್ಸವ ಪ್ರಾರ್ಥನೆಯನ್ನುನೆರವೇರಿಸಿಕೊಟ್ಟರು .
ತಮ್ಮ ಧರ್ಮೋಪದೇಶದಲ್ಲಿ ವಂ ವಿಜಯ್ ಮೊಂಟೇರೊ ಅವರು ಪವಿತ್ರ ವರ್ಜಿನ್ ಮೇರಿಯ ಜನ್ಮವನ್ನು ಸ್ಮರಿಸುವ ಮಹತ್ವವನ್ನು ಎತ್ತಿ ತೋರಿಸಿದರು ಮತ್ತು ಹಿರಿಯರನ್ನು ಗೌರವಿಸುವ ಮತ್ತು ಆರೈಕೆ ಮಾಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಪ್ರಾರ್ಥನೆಯ ನಂತರ, ಹೊಸದಾಗಿ ಬೆಳೆದ ಅಕ್ಕಿ ಮತ್ತು ಕಬ್ಬಿನ ಗುಪ್ಪೆಗಳನ್ನು ವಿತರಿಸಲಾಯಿತು.
You must be logged in to post a comment Login