ಡೆಹ್ರಾಡೂನ್ ಸೆಪ್ಟೆಂಬರ್ 16: ಉತ್ತರಾಖಂಡ್ ಭೀಕರ ಮೇಘಸ್ಪೋಟಕ್ಕೆ ತುತ್ತಾಗಿದೆ. ಸೋಮವಾರ ರಾತ್ರಿಯಿಂದಲೇ ಭಾರಿ ಮಳೆಯಾಗುತ್ತಿದೆ. ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟ ಸಂಭವಿಸಿದ ಪರಿಣಾಮ ದಿಢೀರ್ ಪ್ರವಾಹದ ಸ್ಥಿತಿ ಉಂಟಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಡೆಹ್ರಾಡೂನ್-ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಫನ್ ವ್ಯಾಲಿ ಮತ್ತು ಉತ್ತರಾಖಂಡ್ ದಂತ ಕಾಲೇಜು ಬಳಿಯ ಸೇತುವೆಯೊಂದು ಹಾನಿಗೊಳಗಾಗಿದೆ.
ಡೆಹ್ರಾಡೂನ್‌ನ ಸಹಸ್ರಧಾರ, ಮಾಲ್ ದೇವತಾ ಮತ್ತು ಮಸ್ಸೂರಿಯಲ್ಲಿ ಹಾನಿ ಉಂಟಾಗಿದೆ. ಇಬ್ಬರಿಂದ ಮೂವರು ಮಂದಿ ಕಾಣೆಯಾಗಿದ್ದಾರೆ. ಇನ್ನೊಬ್ಬರು ಮೃತಪಟ್ಟಿರುವ ಬಗ್ಗೆಯೂ ವರದಿಯಾಗಿದೆ.
ಪ್ರಮುಖ ದೇವಾಲಯಗಳಲ್ಲಿ ಒಂದಾಗಿರುವ ತಪಕೇಶ್ವರ ಮಹಾದೇವ ದೇವಾಲಯ ಜಲಾವೃತಗೊಂಡಿದೆ. ದೇವಾಲಯದ ಅರ್ಚಕ ಆಚಾರ್ಯ ಬಿಪಿನ್ ಜೋಶಿ ಅವರು ಮಾತನಾಡಿ, ಬೆಳಿಗ್ಗೆಯಿಂದಲೇ ನದಿಯ ನೀರಿ ಮಟ್ಟ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿ, ಉಕ್ಕಿ ಹರಿಯುತ್ತಿತ್ತು. ಇದೀಗ ಇಡೀ ದೇವಾಲಯದ ಆವರಣವು ಜಲಾವೃತಗೊಂಡಿದೆ. ದೇವಾಲಯದ ಗರ್ಭಗುಡಿ ಸುರಕ್ಷಿತವಾಗಿದೆ. ಈ ರೀತಿಯ ಪರಿಸ್ಥಿತಿ ಬಹಳ ಸಮಯದಿಂದ ಸಂಭವಿಸಿರಲಿಲ್ಲ. ಜನರು ನದಿಗಳ ಬಳಿ ಹೋಗುವುದನ್ನು ತಪ್ಪಿಸಬೇಕು. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ನೀರಿನ ಮಟ್ಟ ದಿಢೀರ್ ಏರಿಕೆಯಾದ ಪರಿಣಾಮ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೈನಿತಾಲ್‌ನಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೂಚಿಸಿದ್ದಾರೆ. ಡೆಹ್ರಾಡೂನ್‌ಲ್ಲಿ ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿರುವ ಸಿಎಂ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಜೊತೆಗಿದ್ದರು.



