ಚೆನ್ನೈ ಮೇ 06: ನಟ ವಿಜಯ್ ಸಾರಥ್ಯದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲಿಯೇ ಭರ್ಜರಿ ಯಶಸ್ಸು ಸಾಧಿಸಿದೆ. ಈ ಸಂಭ್ರಮದ ನಡುವೆ, ವಿಜಯ್ ಅವರ ರಾಜಕೀಯ ಯಶಸ್ಸನ್ನು ನಟಿ ಪೂಜಾ ಹೆಗ್ಡೆ ಅವರು ಮೊದಲೇ ಊಹಿಸಿದ್ದರು ಎನ್ನಲಾದ ವಿಡಿಯೊವೊಂದು ಇನ್ಸ್ಟಾಗ್ರಾಮ್ನಲ್ಲಿ ಸದ್ದು ಮಾಡುತ್ತಿದೆ.

‘ಜನ ನಾಯಗನ್’ ಸಿನಿಮಾದ ಚಿತ್ರೀಕರಣದ ವೇಳೆ ಚಿತ್ರೀಕರಿಸಲಾದ ಈ ವಿಡಿಯೊದಲ್ಲಿ, ಪೂಜಾ ಹೆಗ್ಡೆ ಅವರು ‘ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ’ ಎಂದು ಬರೆದಿರುವ ಬೋರ್ಡ್ ಒಂದನ್ನು ತೋರಿಸುತ್ತಾರೆ. ನಂತರ ಪಕ್ಕದಲ್ಲೇ ಇದ್ದ ವಿಜಯ್ ಅವರ ಕಡೆಗೆ ಕೈ ಸನ್ನೆ ಮಾಡಿ, “ಇವರೇ ಗೆಲ್ಲುವುದು” ಎಂದು ಹೇಳುತ್ತಾರೆ. ಪೂಜಾ ಅವರ ಈ ಮಾತಿಗೆ ವಿಜಯ್ ನಾಚಿಕೆಯಿಂದ ನಗುವ ದೃಶ್ಯ ವಿಡಿಯೊದಲ್ಲಿದೆ.
ಪೂಜಾ ಹೆಗ್ಡೆ ಅವರ ಈ ಹಳೆಯ ವಿಡಿಯೊ ಈಗ ನಿಜವಾಗಿರುವುದನ್ನು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಪೂಜಾ ಅವರೇ, ನಿಮ್ಮ ಭವಿಷ್ಯ ನಿಜವಾಗಿದೆ” ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. “ಪೂಜಾ ಹೆಗ್ಡೆ ಅವರು ಈಗ ಭವಿಷ್ಯ ಹೇಳುವುದನ್ನೂ ಕಲಿತಿದ್ದಾರೆ” ಎಂದು ಮತ್ತೊಬ್ಬರು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ವಿಜಯ್ ಮತ್ತು ಪೂಜಾ ಹೆಗ್ಡೆ ಜೋಡಿಯು 2022ರಲ್ಲಿ ಬಿಡುಗಡೆಯಾದ ‘ಬೀಸ್ಟ್’ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಾಗಿ ನಟಿಸಿತ್ತು. ಇದೀಗ ‘ಜನ ನಾಯಗನ್’ ಸಿನಿಮಾದಲ್ಲೂ ಈ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.