LATEST NEWS
ಕೊಲ್ಲೂರು ಮೂಕಾಂಬಿಕೆಗೆ ಸಾಮೂಹಿಕ ಸೀಯಾಳ ಅಭಿಷೇಕ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ಅಮ್ಮನವರಿಗೆ ಲೋಕಕಲ್ಯಾಣಾರ್ಥವಾಗಿ ಐದನೇ ವರ್ಷದ ಸಾಮೂಹಿಕ ಸೀಯಾಳ ಅಭಿಷೇಕ ಮತ್ತು ವಿವಿಧ ಸೇವೆಗಳು ಶುಕ್ರವಾರ ನೆರವೇರಿತು. ದೇವಳದ ಸುತ್ತಲಿನ ಪರಿವಾರ ದೇವರು ಹಾಗೂ ಕ್ಷೇತ್ರದ ಇತರ ಎಲ್ಲ ದೇವಸ್ಥಾನಗಳಲ್ಲಿಯೂ ಸೀಯಾಳ ಅಭಿಷೇಕ ಮಾಡಲಾಯಿತು.
ಸುಮಾರು 4000ಕ್ಕೂ ಅಧಿಕ ಎಳನೀರನಿಂದ ಅಭಿಷೇಕ ನಡೆಯಿತು. ವಿಶ್ವಾದ್ಯಂತ ಕರೊನಾ ಎರಡನೇ ಅಲೆಯಿಂದ ಅನೇಕ ಸಾವು ನೋವುಗಳ ಸಂಭವಿಸುತ್ತಿದ್ದು, ಇದು ನಮ್ಮ ದೇಶದ ಯಾವ ಪ್ರಜೆಗಳಿಗೂ ಬಾಧಿಸದೆ ಎಲ್ಲರೂ ಆರೋಗ್ಯವಂತರಾಗಿ ದೇಶದ ಸುಭಿಕ್ಷತೆಗಾಗಿ ಪ್ರಾರ್ಥಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಪುರೋಹಿತ ಗಜಾನನ ಜೊಯಿಸ್ ನೇತೃತ್ವದಲ್ಲಿ ಈ ಸೇವಾಕೈಂಕರ್ಯ ನಡೆಯಿತು.
ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರು, ದೇವಳದ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರಿಂದ ಈ ಸೇವೆ ನಡೆಯಿತು. ಶ್ರೀ ಮೂಕಾಂಬಿಕೆ ಸ್ವಯಂಭೂಲಿಂಗಕ್ಕೆ ಶತರುದ್ರಾಭಿಷೇಕ, ಕ್ಷೀರಾಭಿಷೇಕ , ಕುಂಕುಮಾರ್ಚನೆ, ತುಪ್ಪದ ದೀಪ, ಫಲ-ಪುಷ್ಪ, ಸೀರೆ, ಲಡ್ಡು ಸಮರ್ಪಣೆ, ಗುಡಾನ್ನ ನೈವೇದ್ಯ, ಪಂಚಾಮೃತ ಅಭಿಷೇಕ, ಹಾಲು ಪಾಯಸ ಹಾಗೂ ಇನ್ನಿತರ ಸೇವೆಗಳು ನಡೆಯಿತು. ಭಕ್ತರು 4000ಕ್ಕೂ ಅಧಿಕ ಸೀಯಾಳ ಒಪ್ಪಿಸಿ ಈ ಮಹಾತ್ಕಾರ್ಯದಲ್ಲಿ ಭಾಗಿಯಾದರು.