ಉಡುಪಿ, ನ.30:  ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟೆಂಪೊ ಒಂದು ಪಲ್ಲಿಯಾದ ಘಟನೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಉಳಿಯಾರ ಗೋಳಿ ಗ್ರಾಮದ ಕೋತಲ್‌ಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನ.30ರಂದು ಸಂಜೆ ವೇಳೆ ಸಂಭವಿಸಿದ. ಈ ಭೀಕರ ರಸ್ತೆ ಅಪಘಾತದಲ್ಲಿ ಗೂಡ್ಸ್ ಟೆಂಪೋದಲ್ಲಿದ್ದ ಐವರು ಉತ್ತರ ಭಾರತದ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತರನ್ನು ಅಸ್ಸಾಂ ರಾಜ್ಯದ ಪಪ್ಪು ರವಿದಾಸ್(28), ಹರೀಶ್(27), ತ್ರಿಪುರಾದ ಗಪುನಾಥ್(50), ಪಶ್ಚಿಮ ಬಂಗಾಳ ರಾಜ್ಯದ ಕಮಲ್, ಸಮರೇಶ್ ಎಂದು ಗುರುತಿಸಲಾಗಿದೆ.

 

ಮಜೂರಿನ ಪ್ರಸನ್ನ ಶೆಟ್ಟಿ ಎಂಬವರಿಗೆ ಸೇರಿದ ಮದುವೆ ಡೆಕೋರೇಶನ್‌ಗೆ ಸಂಬಂಧಿಸಿದ ಸಲಕರಣೆಗಳನ್ನು ಮಜೂರಿನಿಂದ ಮಲ್ಪೆ ಕಡೆಕಾರಿಗೆ ಟೆಂಪೋದಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಕಡೆಕಾರಿನ ರೆಸಾರ್ಟ್‌ನಲ್ಲಿ ಮದುವೆ ಆರಕ್ಷತೆ ಕಾರ್ಯಕ್ರಮಕ್ಕೆ ಈ ಸೊತ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಮಧ್ಯೆ ಚಾಲಕ ಎದುರಿನಲ್ಲಿ ಹೋಗುತ್ತಿದ್ದ ಬಸ್ಸನ್ನು ಓವರ್‌ಟೇಕ್ ಮಾಡಿ ಮುಂದೆ ಸಾಗಿದ್ದು, ಈ ವೇಳೆ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಎಡ ಬದಿಯ ಡಿವೈಡರ್ ಮೇಲೆ ಹತ್ತಿ ಇನ್ನೊಂದು ಬದಿಯ ಸರ್ವಿಸ್ ರಸ್ತೆಯಲ್ಲಿ ಹೋಗಿ ಪಲ್ಟಿಯಾಯಿತ್ತೆನ್ನಲಾಗಿದೆ. ಇದರ ಪರಿಣಾಮ ಟೆಂಪೋದ ಹಿಂಬದಿಯಲ್ಲಿ ಕಬ್ಬಿಣದ ಸಲಕರಣೆಗಳ ಮಧ್ಯೆ ನಿಂತಿದ್ದ ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡರೆಂದು ತಿಳಿದುಬಂದಿದೆ.

Share Information