ಚಾಮರಾಜನಗರ, ಏಪ್ರಿಲ್ 10: ಕಳ್ಳತನ ಮಾಡುವ ಮುನ್ನ ಕಳ್ಳನೋರ್ವ ದೇವರಿಗೆ ಕೈಮುಗಿದು, ಹಣೆಗೆ ಕುಂಕುಮ ಹಚ್ಚಿಕೊಂಡು ಬಳಿಕ ಹುಂಡಿ ಕಳ್ಳತ ಮಾಡಿರುವ ವಿಚಿತ್ರ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಈ ಕಳ್ಳತನ ನಡೆದಿದ್ದು, ಕಳ್ಳನ ವಿಚಿತ್ರ ವರ್ತನೆಯು ದೇಗುಲದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೊಮ್ಮಲಾಪುರ ಗ್ರಾಮದ ಪಟ್ಟದರಾಣಿ ದೇವಸ್ಥಾನಕ್ಕೆ ಗುರುವಾರ ತಡರಾತ್ರಿ ನುಗ್ಗಿದ ಖದೀಮ, ಗರ್ಭಗುಡಿಯ ಬಳಿ ಬಂದು ಅತ್ಯಂತ ಭಕ್ತಿಯಿಂದ ದೇವರಿಗೆ ನಮಸ್ಕರಿಸಿದ್ದಾನೆ. ಅಷ್ಟಕ್ಕೆ ನಿಲ್ಲದ ಆತ, ಅಲ್ಲಿಯೇ ಇದ್ದ ಕುಂಕುಮವನ್ನು ತೆಗೆದು ಹಣೆಗೆ ಹಚ್ಚಿಕೊಂಡಿದ್ದಾನೆ. ದೇವರ ಅನುಗ್ರಹ ಸಿಕ್ಕಿತು ಎಂದು ಭಾವಿಸಿದವನಂತೆ, ಕೂಡಲೇ ದೇವಸ್ಥಾನದ ಹುಂಡಿಯನ್ನು ಎಗರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಹಿಂದೆ ಕೂಡ ಇದೇ ದೇವಾಲಯದಲ್ಲಿ ಹಲವು ಬಾರಿ ಹುಂಡಿ ಹಣ ಕಳುವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿಯವರು ದೇಗುಲದ ಭದ್ರತೆಗಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದರು. ಕಳ್ಳತನದ ಉದ್ದೇಶದಿಂದ ಬಂದ ಆರೋಪಿಯು ತನ್ನ ಕೃತ್ಯಕ್ಕೂ ಮೊದಲು ದೇವರಿಗೆ ನಮನ ಸಲ್ಲಿಸಿದ ದೃಶ್ಯಗಳು ಈಗ ಪೊಲೀಸರಿಗೆ ಪ್ರಬಲ ಸಾಕ್ಷ್ಯವಾಗಿ ಲಭ್ಯವಾಗಿವೆ. ಘಟನೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.