ತೆಲಂಗಾಣ ಜನವರಿ 09: ಗಂಡನ 2 ಕೋಟಿ ಇನ್ಸುರೆನ್ಸ್ ಹಣಕ್ಕಾಗಿ ಹೆಂಡತಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಮುಗಿಸಿದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಪಲ್ನಾಟಿ ರಮೇಶ್ ಎಂದು ಗುರುತಿಸಲಾಗಿದೆ. ಈತನ ಪತ್ನಿ ಸೌಮ್ಯ ಹಾಗೂ ಆಕೆಯ ಪ್ರಿಯಕರ ದಿಲೀಪ್ ಆರೋಪಿಗಳಾಗಿದ್ದು, ಇದೀಗ ಜೈಲಿನಲ್ಲಿದ್ದಾರೆ.


ರಮೇಶ್ ಮಕ್ಲೂರು ಮಂಡಲದ ಬೋರ್ಗಮ್ (ಕೆ) ಗ್ರಾಮದ ನಿವಾಸಿಯಾಗಿದ್ದು, ಸೌಮ್ಯ ಅವರನ್ನು ಸುಮಾರು 13 ವರ್ಷಗಳ ಹಿಂದೆ ಮದುವೆಯಾಗಿದ್ದರು. ರಮೇಶ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರೆ ಸೌಮ್ಯ ಖಾಸಗಿ ಶಾಲೆಯಲ್ಲಿ ಉದ್ಯೋಗದಲ್ಲಿದ್ದಳು. ತನಿಖಾಧಿಕಾರಿಗಳ ಪ್ರಕಾರ, ಸೌಮ್ಯಾ ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ದಿಲೀಪ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಹೇಳಲಾಗಿದೆ.

ಇದೇ ವಿಚಾರಕ್ಕೆ ರಮೇಶ್ ಮತ್ತು ಸೌಮ್ಯ ನಡುವೆ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದ್ದು, ಈ ಹಿನ್ನಲೆ ಸೌಮ್ಯ ತನ್ನ ಗಂಡನನ್ನು ಕೊಲೆ ಮಾಡಲು ಯೋಚಿಸಿದ್ದಳು. ಅಲ್ಲದೆ ಅದಕ್ಕಾಗಿ ಬಾಡಿಗೆ ಹಂತಕರನ್ನು ನೆಮಿಸಿಕೊಂಡಿದ್ದಳು. ಸೌಮ್ಯಾ ತನ್ನ ಉಂಗುರವನ್ನು ಒತ್ತೆ ಇರಿಸಿ ಹಂತಕರಿಗೆ ಮುಂಗಡವಾಗಿ 35,000 ರೂ.ಗಳನ್ನು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ-ಮಧ್ಯರಾತ್ರಿ ಬ್ಲಿಂಕಿಟ್ ನಲ್ಲಿ ಇಲಿ ಪಾಶಾಣ ಆರ್ಡರ್ ಮಾಡಿದ ಮಹಿಳೆ – ಡೆಲಿವರಿ ಕೊಡಲು ಹೋದ ಯುವಕನಿಗೆ ಶಾಕ್

ರಮೇಶ್ ನ್ನು ಆಗಸ್ಟ್ 2025 ರಲ್ಲಿ ಅಪಘಾತಮಾಡಿ ಕೊಲೆ ಮಾಡಲು ಯತ್ನಿಸಲಾಗಿತ್ತು, ಆದರೆ ದಾಳಿಯಿಂದ ರಮೇಶ್ ಬದುಕುಳಿದಿದ್ದು, ನಂತರ ಮಕ್ಲೂರು ಪೊಲೀಸರಿಗೆ ದೂರು ನೀಡಿದ್ದ. ಅದರ ನಂತರ ಡಿಸೆಂಬರ್ 19 ರ ರಾತ್ರಿ, ಊಟದ ನಂತರ, ಸೌಮ್ಯಾ ಹತ್ತು ನಿದ್ರೆ ಮಾತ್ರೆಗಳನ್ನು ನೀರಿನಲ್ಲಿ ಬೆರೆಸಿ ರಮೇಶ್‌ಗೆ ನೀಡಿದ್ದಾಳೆ ಎನ್ನಲಾಗಿದೆ. ಗಾಢ ನಿದ್ರೆಗೆ ಜಾರಿದ ನಂತರ, ಅವಳು ದಿಲೀಪ್‌ನನ್ನು ಸಂಪರ್ಕಿಸಿದಳು. ಆದರೆ ಹಂತಕರು ಸಿಗದ ಕಾರಣ ಈಕೆ ತನ್ನ ಪ್ರಿಯಕರ ನ ಜೊತೆ ಸೇರಿ ಗಂಡನ ಕತ್ತು ಹಿಸುಕಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಸೌಮ್ಯಾ ಹೇಳಿಕೊಂಡಿದ್ದರು ಮತ್ತು ಯಾವುದೇ ಅನುಮಾನಕ್ಕೆ ಎಡೆ ಮಾಡಿಕೊಡದೆ ಅಂತ್ಯಕ್ರಿಯೆಯ ವಿಧಿಗಳನ್ನು ಪೂರ್ಣಗೊಳಿಸಿದ್ದರು.

ಇದನ್ನೂ ಓದಿ-ವಿಟ್ಲ – ಗಲಾಟೆ ಡ್ರಗ್ಸ್ ಪ್ರಕರಣಗಳಲ್ಲಿನ ಆರೋಪಿ ಅಬ್ದುಲ್ ಖಾದರ್‌ ಚಿಕ್ಕಮಗಳೂರು ಜಿಲ್ಲೆಗೆ ಗಡಿಪಾರು

ಈ ನಡುವೆ ಇಸ್ರೇಲ್‌ನಲ್ಲಿ ವಾಸಿಸುವ ರಮೇಶ್ ಅವರ ಸಹೋದರ ಕೇತಿರ್ ಅನುಮಾನಗೊಂಡು ವಿದೇಶದಿಂದ ಮಕ್ಲೂರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿತು.
ದೂರಿನ ಮೇರೆಗೆ ಕ್ರಮ ಕೈಗೊಂಡ ಪೊಲೀಸರು ಡಿಸೆಂಬರ್ 24 ರಂದು ರಮೇಶ್ ಅವರ ಶವವನ್ನು ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಿದರು. ಶವಪರೀಕ್ಷೆಯಲ್ಲಿ ರಮೇಶ್ ಕೊಲೆಯಾಗಿರುವುದು ದೃಢಪಟ್ಟಿತು. ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ರಮೇಶ್ 2 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಹು ವಿಮಾ ಪಾಲಿಸಿಗಳನ್ನು ತೆಗೆದುಕೊಂಡಿದ್ದು, ಇದೇ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಳು ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ಸೌಮ್ಯ, ದಿಲೀಪ್, ಅಭಿಷೇಕ್ ಮತ್ತು ಗುತ್ತಿಗೆ ಕೊಲೆ ತಂಡದ ಹಲವಾರು ಸದಸ್ಯರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

Share Information