ದುಬೈ/ವಾಷಿಂಗ್ಟನ್: ಇಸ್ರೇಲ್ ತನ್ನ ನೈಸರ್ಗಿಕ ಅನಿಲ ಸ್ಥಾವರಗಳ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಈಗ ಗಲ್ಫ್ ಅರಬ್ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿದೆ. ಕತಾರ್ನ ದ್ರವೀಕೃತ ನೈಸರ್ಗಿಕ ಅನಿಲ (LNG) ಘಟಕಗಳ ಮೇಲೆ ಇರಾನ್ ನಡೆಸಿದ ಬೆಂಕಿ ದಾಳಿಯಿಂದಾಗಿ ಜಾಗತಿಕ ಇಂಧನ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕರಾವಳಿಯ ಬಳಿ ಒಂದು ಸರಕು ಸಾಗಣೆ ಹಡಗು ಬೆಂಕಿಗಾಹುತಿಯಾಗಿದ್ದು, ಕತಾರ್ ಸಮೀಪ ಮತ್ತೊಂದು ಹಡಗಿಗೆ ಹಾನಿಯಾಗಿದೆ. ಆಯಕಟ್ಟಿನ ಪ್ರದೇಶವಾದ ‘ಹಾರ್ಮುಜ್ ಜಲಸಂಧಿ’ಯ (Strait of Hormuz) ಮೇಲೆ ಇರಾನ್ ಹೊಂದಿರುವ ಹಿಡಿತವು ಅಂತರಾಷ್ಟ್ರೀಯ ಹಡಗು ಸಂಚಾರಕ್ಕೆ ದೊಡ್ಡ ಮಟ್ಟದ ಅಪಾಯವನ್ನು ತಂದೊಡ್ಡಿದೆ. ಗಲ್ಫ್ನಲ್ಲಿ ಮತ್ತೊಂದು ಇಂಧನ ಸೌಲಭ್ಯದ ಮೇಲೆ ಇರಾನ್ ದಾಳಿ ನಡಸಿದ್ದು. ಕುವೈತ್ನ ಅಲ್-ಅಹ್ಮದಿ ತೈಲ ಸಂಸ್ಕರಣಾಗಾರದ ಮೇಲೆ ದಾಳಿಯಾಗಿದೆ.
ಕತಾರ್ನ ಅನಿಲ ಘಟಕಗಳ ಮೇಲೆ ದಾಳಿ ಮುಂದುವರಿದರೆ ಇರಾನ್ನ ಅತಿದೊಡ್ಡ ‘ಸೌತ್ ಪಾರ್ಸ್’ ಅನಿಲ ಸ್ಥಾವರವನ್ನು ಸಂಪೂರ್ಣವಾಗಿ ನಾಶಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.