ಬೆಂಗಳೂರು, ಏಪ್ರಿಲ್ 02: ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿನ ಬಕೆಟ್ಗೆ ಬಿದ್ದು ಸಾವನ್ನಪ್ಪಿದ ಘಟನೆಯಿಂದ ಮನನೊಂದ ತಾಯಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಸಂಭವಿಸಿದೆ.

ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ತಾಯಿ ಹಾಗೂ ಅಗಸ್ತ್ಯ ಮೃತಪಟ್ಟ ಮಗು. ಪ್ರತಿಭಾ ಮತ್ತು ಅವರ ಪತಿ ಮಹಂತೇಶ್ ಇಬ್ಬರೂ ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದು, ಪ್ರತಿಭಾ ಅವರು ಮನೆಯಿಂದಲೇ ಕೆಲಸ (Work From Home) ಮಾಡುತ್ತಿದ್ದರು.
ಏಪ್ರಿಲ್ 1ರಂದು ಮನೆಯಲ್ಲಿ ತಾಯಿ ಮತ್ತು ಮಗು ಇಬ್ಬರೇ ಇದ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಪ್ರತಿಭಾ ಅವರು ಒಣಹಾಕಿದ್ದ ಬಟ್ಟೆಗಳನ್ನು ತರಲು ಟೆರೇಸ್ಗೆ ಹೋಗಿದ್ದ ವೇಳೆ, ಆಟವಾಡುತ್ತಿದ್ದ ಮಗು ಅಗಸ್ತ್ಯ ಬಚ್ಚಲು ಮನೆಗೆ ಹೋಗಿದ್ದಾನೆ. ಈ ವೇಳೆ ಬಚ್ಚಲು ಮನೆಯಲ್ಲಿದ್ದ ನೀರಿನ ಬಕೆಟ್ಗೆ ಮಗು ಆಕಸ್ಮಿಕವಾಗಿ ಬಿದ್ದಿದೆ. ಉಸಿರುಗಟ್ಟಿ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಟೆರೇಸ್ನಿಂದ ವಾಪಸ್ ಬಂದ ತಾಯಿಗೆ ಮಗುವಿನ ಸ್ಥಿತಿ ಕಂಡು ತೀವ್ರ ಆಘಾತವಾಗಿದೆ. ತನ್ನ ನಿರ್ಲಕ್ಷ್ಯದಿಂದಲೇ ಮಗು ಸಾವನ್ನಪ್ಪಿದೆ ಎಂಬ ಅಪರಾಧ ಪ್ರಜ್ಞೆಯಿಂದ ಪ್ರತಿಭಾ ಅವರು ತೀವ್ರವಾಗಿ ನೊಂದಿದ್ದಾರೆ.
ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳಿದ ಪತಿ ಮಹಂತೇಶ್, ಪತ್ನಿ ಬಾಗಿಲು ತೆಗೆಯದಿದ್ದಾಗ ಪರ್ಯಾಯ ಕೀ ಬಳಸಿ ಒಳಬಂದಿದ್ದಾರೆ. ಈ ವೇಳೆ ಪ್ರತಿಭಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗುವನ್ನು ಹಾಸಿಗೆಯ ಮೇಲೆ ಮಲಗಿಸಲಾಗಿತ್ತು. ಸ್ಥಳದಲ್ಲಿ ಪತ್ತೆಯಾದ ಡೆತ್ನೋಟ್ನಲ್ಲಿ, “ನನ್ನ ಮಗುವನ್ನು ಉಳಿಸಿಕೊಳ್ಳಲು ನನಗಾಗಲಿಲ್ಲ, ಮಗುವಿನ ಸಾವಿಗೆ ನಾನೇ ಕಾರಣ” ಎಂದು ಬರೆದಿರುವುದು ತಿಳಿದುಬಂದಿದೆ. ಮಗುವಿನ ಸಾವಿನ ನಂತರ ಪ್ರತಿಭಾ ಅವರು ಮೊದಲು 15ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸಿ ಹಾಗೂ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೊನೆಗೆ ರಕ್ತ ಬಾರದಿದ್ದಾಗ ನೇಣಿಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.