ಚೆನ್ನೈ ಮೇ 07: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ನಾಯಕ ವಿಜಯ್, ಸರ್ಕಾರ ರಚನೆಯ ಕಸರತ್ತು ತೀವ್ರಗೊಳಿಸಿದ್ದಾರೆ. ಗುರುವಾರ ಬೆಳಿಗ್ಗೆ ಲೋಕಭವನಕ್ಕೆ ಆಗಮಿಸಿದ ಅವರು, ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿ ಮಾಡಿ ಎರಡನೇ ಬಾರಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

ತಿರುಚಿರಾಪಳ್ಳಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರಗಳಿಂದ ಆಯ್ಕೆಯಾಗಿರುವ ವಿಜಯ್, ಬುಧವಾರವಷ್ಟೇ ಕಾಂಗ್ರೆಸ್ನ ಐವರು ಶಾಸಕರ ಬೆಂಬಲ ಪತ್ರ ಸೇರಿದಂತೆ ಒಟ್ಟು 113 ಶಾಸಕರ ಬೆಂಬಲದ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಆದರೆ, 234 ಸದಸ್ಯ ಬಲದ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 118 ತಲುಪಲು ಟಿವಿಕೆಗೆ ಇನ್ನೂ ಐದು ಸ್ಥಾನಗಳ ಕೊರತೆಯಿದೆ.
ಗುರುವಾರ ನಡೆದ ಎರಡನೇ ಸುತ್ತಿನ ಮಾತುಕತೆಯ ವೇಳೆ, “ಬಹುಮತ ಸಾಬೀತುಪಡಿಸಲು ನಿಮ್ಮ ಬಳಿ ಸ್ಪಷ್ಟ ಸಂಖ್ಯಾಬಲವಿದೆಯೇ?” ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅಗತ್ಯ ಸಂಖ್ಯೆಗಿಂತ ಕಡಿಮೆ ಶಾಸಕರ ಬೆಂಬಲ ಇರುವುದರಿಂದ, ಹೆಚ್ಚುವರಿ ಬೆಂಬಲ ಪತ್ರದೊಂದಿಗೆ ಬರುವಂತೆ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ಅತಿದೊಡ್ಡ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸದಿದ್ದರೆ, ಟಿವಿಕೆ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಿದೆ. ಮೊದಲ ಪ್ರಯತ್ನದಲ್ಲೇ ಇತಿಹಾಸ ಬರೆದಿರುವ ವಿಜಯ್, ಅಧಿಕಾರದ ಗದ್ದುಗೆ ಏರಲು ಬೇಕಾದ ಕೊನೆಯ ಐದು ಶಾಸಕರ ಬೆಂಬಲಕ್ಕಾಗಿ ಪಕ್ಷೇತರರು ಅಥವಾ ಸಣ್ಣ ಪಕ್ಷಗಳತ್ತ ಚಿತ್ತ ಹರಿಸಿದ್ದಾರೆ.