ಚೆನ್ನೈ,ಏಪ್ರಿಲ್ 01: ತಮಿಳು ಚಿತ್ರರಂಗದ ಜನಪ್ರಿಯ ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಸಂಸ್ಥಾಪಕ ಅಧ್ಯಕ್ಷ ವಿಜಯ್ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮಾರ್ಚ್ 30ರಂದು ಚೆನ್ನೈನ ಪೆರಂಬೂರ್ ಭಾಗದಲ್ಲಿ ವಿಜಯ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಬೃಹತ್ ರೋಡ್ಶೋ ನಡೆಸಿದ್ದರು. ಈ ಕಾರ್ಯಕ್ರಮಕ್ಕೆ ನಿಗದಿಪಡಿಸಿದ್ದ ಸಮಯಕ್ಕಿಂತ ಹೆಚ್ಚಿನ ಕಾಲ ಪ್ರಚಾರ ಮುಂದುವರಿಸಿದ್ದು ಮತ್ತು ಅನುಮತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಧ್ವನಿವರ್ಧಕಗಳನ್ನು ಬಳಸಿದ್ದು ನಿಯಮ ಬಾಹಿರ ಎಂದು ಚುನಾವಣಾ ಹಾರುವ ದಳದ ಅಧಿಕಾರಿಗಳು ದೂರಿದ್ದಾರೆ. ಈ ದೂರಿನನ್ವಯ ಪೆರವಲ್ಲೂರು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ರೋಡ್ಶೋ ವೇಳೆ ಸೇರಿದ ಬೃಹತ್ ಜನಸಂದಣಿಯಿಂದಾಗಿ ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳಿಗೂ ಅಡ್ಡಿ, ಚುನಾವಣಾ ಆಯೋಗದ ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ, ಅನುಮತಿ ಪಡೆದಿದ್ದಕ್ಕಿಂತ ಮೂರು ಪಟ್ಟು ಹೆಚ್ಚಿನ ಸ್ಪೀಕರ್ಗಳನ್ನು ಬಳಸಿ ಧ್ವನಿ ಮಾಲಿನ್ಯ ಉಂಟುಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 126(2) ಹಾಗೂ 189(2) ಸೇರಿದಂತೆ ಒಟ್ಟು ಐದು ವಿವಿಧ ಕಲಂಗಳ ಅಡಿಯಲ್ಲಿ ವಿಜಯ್ ಮತ್ತು ಅವರ ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಮುಂಬರುವ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ವಿಜಯ್ ಅವರಿಗೆ ಈ ಪ್ರಕರಣವು ಆರಂಭಿಕ ಕಾನೂನು ಸಂಕಷ್ಟ ತಂದೊಡ್ಡಿದೆ. ಆದರೆ, ಈ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಕರೆದಿರುವ TVK ಕಾರ್ಯಕರ್ತರು, ತಮ್ಮ ನಾಯಕನ ಬೆಳವಣಿಗೆಯನ್ನು ಸಹಿಸದೆ ಆಡಳಿತಾರೂಢ ಸರ್ಕಾರ ಈ ರೀತಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.