ವಾಷಿಂಗ್ಟನ್,ಮಾರ್ಚ್ 27: ಜಾಗತಿಕ ತೈಲ ಸಾಗಾಣಿಕೆಯ ಸಂಜೀವಿನಿ ಎನಿಸಿರುವ ಹಾರ್ಮುಜ್ ಜಲಸಂಧಿಯ (Strait of Hormuz) ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಇರಾನ್ಗೆ ನೀಡಲಾಗಿದ್ದ ಗಡುವನ್ನು ಮೊದಲು ಐದು ದಿನಗಳಿಗೆ ಸೀಮಿತಗೊಳಿಸಲಾಗಿತ್ತು, ಆದರೆ ಈಗ ಅದನ್ನು ಏಪ್ರಿಲ್ 6ರವರೆಗೆ ಅಂದರೆ ಒಟ್ಟು ಹತ್ತು ದಿನಗಳ ಕಾಲ ವಿಸ್ತರಿಸಲಾಗಿದೆ.

ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಣಿಸಲು ಮತ್ತು ಮಾತುಕತೆಗೆ ಹೆಚ್ಚಿನ ಅವಕಾಶ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. “ಇರಾನ್ ತನ್ನ ಹಠಮಾರಿ ಧೋರಣೆ ಬಿಟ್ಟು ಜಲಸಂಧಿಯನ್ನು ಮುಕ್ತಗೊಳಿಸಬೇಕು. ಏಪ್ರಿಲ್ 6ರ ನಂತರ ಯಾವುದೇ ಕಾರಣಕ್ಕೂ ಕಾಲಾವಕಾಶ ನೀಡುವುದಿಲ್ಲ,” ಎಂದು ಟ್ರಂಪ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಶೇಕಡಾ 20ರಷ್ಟು ತೈಲ ಪೂರೈಕೆಯ ಮಾರ್ಗವಾಗಿದೆ. ಈ ಗಡುವು ವಿಸ್ತರಣೆಯ ನಿರ್ಧಾರದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿದ್ದ ತಲ್ಲಣವು ಸದ್ಯಕ್ಕೆ ತುಸು ಶಾಂತವಾಗಿದೆ. ಒಂದು ವೇಳೆ ಸಂಧಾನ ವಿಫಲವಾದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಭಾರಿ ಏರಿಕೆ ಕಾಣುವ ಭೀತಿ ಎದುರಾಗಿದೆ.
ಇರಾನ್ ಸರ್ಕಾರವು ಅಮೆರಿಕ ವಿಧಿಸಿರುವ 15 ಅಂಶಗಳ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದು, ಏಪ್ರಿಲ್ 6ರ ಒಳಗಾಗಿ ಒಂದು ಅಂತಿಮ ತೀರ್ಮಾನಕ್ಕೆ ಬರಬೇಕಿದೆ. ಈ ಹತ್ತು ದಿನಗಳ ಅವಧಿಯು ಯುದ್ಧ ಅಥವಾ ಶಾಂತಿ ಒಪ್ಪಂದದ ನಡುವಿನ ನಿರ್ಣಾಯಕ ಹಂತ ಎಂದು ವಿಶ್ಲೇಷಿಸಲಾಗುತ್ತಿದೆ.