ಮಂಗಳೂರು ಜನವರಿ 24: ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ವೇಳೆ ಎಚ್ಚರಿಕೆ ವಹಿಸಿ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಗಂಭೀರ ಪ್ರಕರಣದಲ್ಲಿನ ಆರೋಪಿಗಳು ಸಿಗದೇ ಇದ್ದಲ್ಲಿ ಜಾಮೀನು ನೀಡದವರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅದರಂತೆ ಸುಮಾರು 15 ಮಂದಿ ರೌಡಿಗಳ ಬಂಧಿಸಿ ಪ್ರಕರಣಗಳಲ್ಲಿ ವಿಚಾರಣೆ ಆರಂಭಿಸಲಾಗಿದೆ. ಬಾಕಿ ಇರುವ ಆರೋಪಿಗಳ ಆಸ್ತಿಯೇ ಮುಟ್ಟುಗೋಲು ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈಗಾಗಲೇ ಓರ್ವ ಆರೋಪಿಯ ಮನೆಯನ್ನು ನ್ಯಾಯಾಲಯದಿಂದ ಹರಾಜು ಮಾಡಲಾಗಿದೆ. ಜಾಮೀನು ನೀಡಿದವರ ಮೇಲೆ ಕ್ರಮ ಕೈಗೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಜಾಮೀನು ನೀಡಿದ 11 ಮಂದಿಗೆ 10 ಸಾವಿರದಿಂದ 2 ಲಕ್ಷ ರೂ. ವರೆಗೆ ದಂಡ ಹಾಕಲಾಗಿದೆ. 17 ಮಂದಿ ಜಾಮೀನುದಾರರ ಆಸ್ತಿಯ ಆರ್ ಟಿಸಿಯಲ್ಲಿ ‘ನ್ಯಾಯಾಲಯದ ಆಸ್ತಿ‘ ಎಂದು ನಮೂದಿಸಲಾಗಿದೆ ಎಂದರು.
ಕೋಮು ಹತ್ಯೆ, ಹತ್ಯೆ, ದರೋಡೆ, ಸುಲಿಗೆ, ಅತ್ಯಾಚಾರ ಮುಂತಾದ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿರುವ ರೌಡಿ ಶೀಟರ್ಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.