ಕೊಪ್ಪಳ,ಮಾರ್ಚ್ 30: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಕಳೆದ ಕೆಲವು ದಿನಗಳಿಂದ ವಿಕೃತ ಮನಸ್ಥಿತಿಯ ವ್ಯಕ್ತಿಯೊಬ್ಬನ ಹಾವಳಿ ಮಿತಿ ಮೀರಿದ್ದು, ಮಹಿಳೆಯರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಮನೆಗಳ ಕಾಂಪೌಂಡ್ ಹಾರಿ ಆವರಣಕ್ಕೆ ನುಗ್ಗುವ ಈ ಕಿಡಿಗೇಡಿ, ಮಹಿಳೆಯರ ಒಳಉಡುಪುಗಳನ್ನು ಕಳ್ಳತನ ಮಾಡುತ್ತಿರುವ ಘಟನೆಗಳು ಸರಣಿಯಾಗಿ ವರದಿಯಾಗುತ್ತಿವೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸಿಬಿಎಸ್ (CBS) ಬಡಾವಣೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ವಿಚಿತ್ರ ಹಾಗೂ ಅಸಹ್ಯಕರ ಕೃತ್ಯಗಳು ನಡೆಯುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾತ್ರಿ ವೇಳೆಯಲ್ಲಿ ಈ ವಿಕೃತ ಕಾಮಿ ಸಕ್ರಿಯನಾಗಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದ್ದಾನೆ. ಜನವಸತಿ ಪ್ರದೇಶದ ಮನೆಗಳ ಗೋಡೆ ಹಾರಿ ಒಳಪ್ರವೇಶಿಸುವ ಈತ, ಒಣಗಲು ಹಾಕಿರುವ ಮಹಿಳೆಯರ ಬಟ್ಟೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಾನೆ.
ಬಡಾವಣೆಯ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ನಡೆದ ಕಳ್ಳತನದ ದೃಶ್ಯವು ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಈ ದೃಶ್ಯಾವಳಿಗಳಲ್ಲಿ ವ್ಯಕ್ತಿಯು ಅತ್ಯಂತ ಸಂಚು ರೂಪಿಸಿ, ಅಕ್ಕಪಕ್ಕದಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡು ಕಾಂಪೌಂಡ್ ಹಾರಿ ಕೃತ್ಯ ಎಸಗುವುದು ಕಂಡುಬಂದಿದೆ. ಸದ್ಯ ಈ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.