‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ್ದ ಸುಷ್ಮಾ ರಾಜ್ ಅವರು ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಅಗಲಿದ ತಂದೆಯ ನೆನಪಿಗಾಗಿ ಮಗನಿಗೆ ಅಪ್ಪನ ಹೆಸರನ್ನೇ ಇಟ್ಟು ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಕರಾವಳಿಯ ಹೆಣ್ಣು ಹುಲಿ ಎಂದೇ ಪ್ರಸಿದ್ಧರಾದ ಸುಷ್ಮಾ ರಾಜ್, ಹಲವು ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ವಿಶೇಷವಾಗಿ ಹುಲಿ ಕುಣಿತದ ಮೂಲಕ ಮನೆಮಾತಾಗಿದ್ದ ಅವರು, ತಮ್ಮ ವಿಭಿನ್ನ ಪ್ರತಿಭೆಯಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.

2024ರಲ್ಲಿ ತಮ್ಮ ಪ್ರೀತಿಯ ಸಂಗಾತಿ ನಿಶಾನ್ ನರೇಂದ್ರ ಅವರನ್ನು ಸುಷ್ಮಾ ವಿವಾಹವಾಗಿದ್ದರು. ಹಲವು ವರ್ಷಗಳ ಪ್ರೀತಿಗೆ ಕುಟುಂಬಸ್ಥರ ಒಪ್ಪಿಗೆ ದೊರೆತು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ಇದೀಗ ಗಂಡು ಮಗುವಿಗೆ ಪೋಷಕರಾಗಿ ಬಡ್ತಿ ಪಡೆದಿದ್ದಾರೆ.
ಗಂಡು ಮಗುವಿನ ಜನನದ ಬಳಿಕ ತಮ್ಮ ತಂದೆ ಅಶೋಕ್ ರಾಜ್ ಅವರನ್ನು ನೆನೆದು “Ashok Raj is back” ಎಂದು ಸಾಮಾಜಿಕ ಜಾಲತಾಣದಲ್ಲಿ ಸುಷ್ಮಾ ಪೋಸ್ಟ್ ಹಂಚಿಕೊಂಡಿದ್ದರು. ತಂದೆಯ ಮೇಲಿನ ಅಪಾರ ಪ್ರೀತಿ ಮತ್ತು ಗೌರವವನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ.
ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸುಷ್ಮಾ ರಾಜ್–ನಿಶಾನ್ ದಂಪತಿ ಮಗನ ನಾಮಕರಣ ಶಾಸ್ತ್ರವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಈ ಸಂಭ್ರಮದ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದಂಪತಿಗೆ ಶುಭಾಶಯಗಳನ್ನು ಕೋರಿದ್ದಾರೆ.